ಮೈಸೂರು: ಇಂದು ಕಬಿನಿ ಡ್ಯಾಂನಲ್ಲಿ ಬರ್ತಡೇ ಆಚರಿಸಿಕೊಳ್ಳಲು ಹೇಳದ ಕೇಳದೆ ಮನೆಬಿಟ್ಟು ಬಂದ ಬೆಂಗಳೂರಿನ ಯುವಕರಿಬ್ಬರು ರಸ್ತೆ ಅಪಘಾತದಲ್ಲಿ ಧಾರುಣವಾಗಿ ಹುಟ್ಟು ಹಬ್ಬದ ದಿನದಂದೇ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ಮುಖ್ಯ ರಸ್ತೆಯ ಹೈರಿಗೆ ಸಮೀಪದ ನಡೆದಿದೆ.
ಗಣೇಶ್(20) ಹಾಗೂ ಆತನ ಸ್ನೇಹಿತ ಗಿರೀಶ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕರಾಗಿದ್ದಾರೆ. ಮೂಲತಃ ಬೆಂಗಳೂರಿನ ಸೋಮನಹಳ್ಳಿ ಗ್ರಾಮದರಾಗಿರುವ ಇಬ್ಬರು ಯುವಕರು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಬಿಟ್ಟಿದ್ದಾರೆ. ಇಂದು ಮೃತ ದುರ್ದೈವಿ ಗಣೇಶನ ಹುಟ್ಟು ಹಬ್ಬ ಆಚರಿಸಲು ಮೈಸೂರು ಜಿಲ್ಲೆಯ ಹೆಚ್.ಡಿಕೋಟೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರಿನ ರೆಸಾರ್ಟೋಂದರಲ್ಲಿ ಬರ್ತಡೇ ಪಾರ್ಟಿ ಮಾಡಲು ನಿನ್ನೆಯೇ ಮನೆ ಬಿಟ್ಟಿದ್ದರು. ರಾತ್ರಿ ಬೆಂಗಳೂರು ರಸ್ತೆಯ ಡಾಬವೊಂದರಲ್ಲಿ ಕಂಠಪೂರ್ತಿ ಕುಡಿದು ಮಲಗಿ ಬೆಳಗಿನ ಜಾವ ಕಬಿನಿ ಜಲಾಶಯದ ಕಡೆ ಹೊರಟ ವೇಳೆ ಹೆಚ್.ಡಿ ಕೋಟೆ ಮುಖ್ಯ ರಸ್ತೆಯ ಹೈರಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ರಾತ್ರಿ ಗಸ್ತು ತಿರುಗುತ್ತಿದ್ದ ಸಂಚಾರಿ ಪೊಲೀಸರು ಬೆಳ್ಳಗ್ಗೆ ಅಪಘಾತ ನಡೆದಿರುವ ಬಗ್ಗೆ ತಿಳಿದು ಮೃತರ ಶವವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಹೆಚ್.ಡಿ. ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಬರ್ತಡೇ ಪಾರ್ಟಿ ಮಾಡಲು ಹೇಳದ ಕೇಳದ ಬೆಂಗಳೂರಿನಿಂದ ನಾಲ್ಕು ಮಂದಿ ಸ್ನೇಹಿತರು ಆಗಮಿಸಿದ್ದಾರೆ ಎಂಬ ಶಂಕೆ ಬೆಂಗಳೂರು ಮೂಲದ ಸಂಬಂಧಿಕರ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಇಬ್ಬರು ಮೃತ ಪಟ್ಟಿರುವುದನ್ನು ಕಂಡು ಇನ್ನಿಬ್ಬರು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿದರು.
ಹುಟ್ಟು ಹಬ್ಬದ ದಿನವೇ ಮೃತಪಟ್ಟ ಗಣೇಶ್ ಅವರ ತಾಯಿ 15 ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆಯಲ್ಲಿ ಮಗನೂ ಸಹ ಬರ್ತಡೇ ಪಾರ್ಟಿ ಮಾಡಿಕೊಳ್ಳಲು ಬಂದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.