ಮೈಸೂರು: ಉಪಚುನಾವಣೆಯಲ್ಲಿನ ಸೋಲೂ ಜಿಪಂ-ತಾಪಂ ಚುನಾವಣೆಯಲ್ಲಿ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಶೇ.99 ರಷ್ಟು ಮಂದಿ ಫಲಿತಾಂಶವನ್ನು ನೋಡಿಯೇ ಇಲ್ಲವೆಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ತಮ್ಮ ಹುಟ್ಟೂರಾದ ಸಿದ್ಧರಾಮನಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ ಸಿಎಂ ಸಿದ್ಧರಾಮಯ್ಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಉಪ ಚುನಾವಣಾ ಫಲಿತಾಂಶ ಯಾವುದೇ ರೀತಿಯ ಪರಿಣಾಮ ಬೀರಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮೃತ ಪೊಲೀಸ್ ಮಲ್ಲಿಕಾರ್ಜುನ ಬಂಡೆ ಪತ್ನಿ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರ ಸಿದ್ಧವಿದ್ದು ನಿಂತು ಹೋಗಿದ್ದ ಅವರ ಸಂಬಳವನ್ನು ಮುಂದುವರೆಸುವಂತೆ ಸೂಚಿಸಿದ್ದೇನೆ. ನೂತನ ಲೋಕಾಯುಕ್ತರ ನೇಮಕ ವಿಚಾರದಲ್ಲಿ ನಿಯಮದ ಪ್ರಕಾರ ಚೀಫ್ ಜಸ್ಟೀಸ್, ಗೌರ್ನರ್ ವಿಪಕ್ಷ ನಾಯಕರು ಹಾಗೂ ಸಂಬಂಧಪಟ್ಟವರ ಜತೆ ಚರ್ಚಿಸುವೆ ಎಂದರು.
ಜೆಎನ್ಯು ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ವಾಕ್ ಸ್ವಾತಂತ್ರ್ಯ ಹಕ್ಕಿಕ್ಕುವ ಪ್ರಯತ್ನ, ಕೇಂದ್ರದ ವಿರುದ್ಧ ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹ ಆಗಲ್ಲ ಎಂದರು. ತಮಿಳುನಾಡಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸಾವು ತಮಿಳುನಾಡು ಡಿಜಿಪಿ ಜತೆ ರಾಜ್ಯ ಡಿಜಿಪಿ ಮಾತುಕತೆ ನಡೆಸಲಿದ್ದಾರೆ ಎಂದರು.