ಮೈಸೂರು: ಪಿಎಚ್ ಡಿ ಪಡೆಯಲು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಸಂಶೋದನಾ ಗೈಡ್ ನ ಕಾಟ ತಾಳಲಾರದ ಕೇರಳದ ವಿದ್ಯಾರ್ಥಿಯೊರ್ವ ಡೆತ್ನೋಟ್ ಬರೆದಿಟ್ಟು ಕಾಲೇಜಿನ ಕಟ್ಟಡದ ಮೇಲೆಯೇ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೇರಳದ ತಿರೂಚೂರಿನ ಸಂಶೋಧನಾ ವಿದ್ಯಾರ್ಥಿ ರಿನೇಶ್ ಕೇ ರಾಜನ್ 2015 ರಿಂದ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಅಪರಾಧ ಶಾಸ್ತ್ರ ಹಾಗೂ ನ್ಯಾಯ ವಿಜ್ಞಾನ ವಿಭಾಗದಲ್ಲಿ ಸಂಶೋದನೆ ಅಧ್ಯಯನ ನಡೆಸುತ್ತಿದ್ದು, ಈತನಿಗೆ ಮಹಾರಾಜ ಪದವಿ ಕಾಲೇಜು ಪ್ರಾಂಶುಪಾಲರಾಗಿರುವ ಪ್ರೊಫೆಸರ್ ನಾಗರಾಜಮೂರ್ತಿ ಮಾರ್ಗದರ್ಶಕರಾಗಿ ಅಧ್ಯಯನ ನಡೆಸುತ್ತಿದ್ದಾನೆ. ಆದರೆ ಮಾಗದರ್ಶಕರಾಗಿರುವ ಪ್ರೊ. ನಾಗರಾಜಮೂರ್ತಿ ಪಿಎಚ್ ಡಿ ಕಂಪ್ಲೀಟ್ ಮಾಡಿಕೊಂಡು ಅದರ ಸರ್ಟಿಫೀಕೆಟ್ ಪಡೆಯಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಂಶೋದನಾ ವಿದ್ಯಾರ್ಥಿ ರಿನೇಶ್ ಕೇ ರಾಜನ್ ಸ್ನೇಹಿತನೊಬ್ಬನ ಬಳಿ ತನ್ನ ಅಳಲು ಹೇಳಿಕೊಂಡಿದ್ದನು.
ಈ ವಿಚಾರ ತಿಳಿಯುತ್ತಿದ್ದಂತೆ ಸಿಟಿಗೆದ್ದಿರುವ ಪ್ರೊಫೆಸರ್ ನಾಗರಾಜಮೂರ್ತಿ ಸಂಶೋದನಾ ವಿದ್ಯಾರ್ಥಿಗೆ ನಾನು ಹಣ ಕೇಳಿದ ವಿಚಾರವನ್ನು ಎಲ್ಲರ ಬಳಿಯೂ ಹೇಳುತ್ತೀಯಾ ನೀನು ಪಿಎಚ್ಡಿ ಹೇಗೆ ಪೂರ್ಣಗೊಳಿಸುತ್ತೀಯಾ ನಾನು ನೋಡುತ್ತೇನೆ. ನೀನು ಎಲ್ಲಿಯೂ ಪಿಎಚ್ ಡಿ ಮಾಡಲು ನಾನು ಬಿಡುವುದಿಲ್ಲವೆಂದು ಧಮಕಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಪಿಎಚ್ಡಿ ಪೂರ್ಣಗೊಳಿಸದಂತೆ ಮಾನಸಿಕ ಕಿರುಕುಳ ನೀಡಿದ್ದಾರೆ.
ಇದರಿಂದ ಮನನೊಂದ ಕೇರಳ ವಿದ್ಯಾರ್ಥಿ ರಿನೇಶ್ ಕೇ ರಾಜನ್ ತನ್ನ ಸಾವಿಗೆ ನನ್ನ ಗೈಡ್ ಆಗಿದ್ದ ನಾಗರಾಜಮೂರ್ತಿ ಅವರೇ ಕಾರಣರೆಂದು ಮೂರು ಪುಟಗಳ ಡೆತ್ನೋಟ್ ಹಾಗೂ ಸ್ನೇಹಿತರಿಗೆ ವಾಟ್ಸ್ ಅಪ್ ನಲ್ಲಿ ಎಸ್ಎಂಎಸ್ ರವಾನಿಸಿ ಮಹಾರಾಜ ಪದವಿ ಕಾಲೇಜು ಮೇಲಂತಸ್ತು ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ ಕಾಲೇಜು ಪ್ರಾಧ್ಯಾಪಕರು ಹಾಗೂ ಲಕ್ಷ್ಮಿಪುರಂ ಠಾಣೆಯ ಪೊಲೀಸರು ವಿದ್ಯಾರ್ಥಿಯ ಮನವೊಲಿಸಿ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ ವಿರುದ್ಧ ಆತ್ಮಹತ್ಯೆ ಯತ್ನ ಪಕ್ರರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನ್ನ ಪಿಎಚ್ ಡಿಗೆ ತೊಂದರೆ ನೀಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗೈಡ್ ವಿರುದ್ಧ ಸಂಶೋದನಾ ವಿದ್ಯಾರ್ಥಿ ದೂರು ದಾಖಲಿಸಿದ್ದಾರೆ.