ಮೈಸೂರು: ಮದುವೆಯಾಗುತ್ತೇನೆಂದು ಪ್ರೀತಿಯ ನಾಟಕವಾಡಿ ಅತ್ಯಾಚಾರವೆಸಗಿ ಬೇರೊಂದು ಮದುವೆಯಾಗಲು ಹೋದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ.
ಶಿವಕುಮಾರ್(35) ಎಂಬಾತನೇ ಯುವತಿಗೆ ವಂಚಿಸಿ ಬೇರೊಂದು ವಿವಾಹವಾಗಲು ಹೋಗಿ ಸಿಕ್ಕಿಬಿದ್ದಿರುವ ಆರೋಪಿಯಾಗಿದ್ದು, ಆರೋಪಿಯನ್ನು ಬಂಧಿಸಿರುವ ಉದಯಗಿರಿ ಠಾಣಾ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಸ್ವಲ್ಪ ದಡ್ಡಿಯಾಗಿದ್ದರಿಂದ 32 ವರ್ಷ ಕಳೆದಿದ್ದರೂ ವಿವಾಹ ಮಾಡಿರಲಿಲ್ಲ. ಸದಾ ಮನೆಯಲ್ಲೇ ಇರುತ್ತಿದ್ದ ಆಕೆಯ ಬಗ್ಗೆ ಚೆನ್ನಾಗಿ ತಿಳಿದು ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ಅತ್ಯಾಚಾರ ವೆಸಗಿದ್ದಾನೆ ಬಂಧಿತ ಆರೋಪಿ ಶಿವಕುಮಾರ್. ಕೊನೆಗೆ 2 ತಿಂಗಳ ಗರ್ಭೀಣಿ ಆದ ಬಳಿಕ ಅವಳಿಗೆ ಕೈ ಕೊಟ್ಟು ಹಣ ಹಾಗೂ ವಿದ್ಯಾವಂತೆ ಆಗಿರುವ ಮತ್ತೊಂದು ಯುವತಿಯನ್ನು ಮದುವೆಯಾಗಲು ನಿಶ್ಚಯಿಸಿದ್ದಾನೆ.
ಅದರಂತೆ ಮದುವೆ ದಿನಾಂಕವನ್ನು ನಿಗಧಿ ಪಡಿಸಿ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಗೆ ಮೋಸವೆಸಗಿ ಮದುವೆಯಾಗಲು ನಿಶ್ಚಯಿಸಿದ್ದನು. ಈ ವಿಚಾರ ತಿಳಿದ ಅತ್ಯಾಚಾರಕ್ಕೆ ಒಳಗಾದ ಯುವತಿ ಬೇಸರದಿಂದ ಇರುವುದನ್ನು ಕಂಡ ಮನೆಯವರು ಕೇಳಿದಾಗ ತನ್ನ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ಹಾಗೂ ನಂಬಿಸಿ ಮೋಸ ಮಾಡಿರುವ ಬಗ್ಗೆ ಪೋಷಕರಿಗೆ ಹೇಳಿದ್ದಾಳೆ. ಕೊನೆಗೆ ಪೋಷಕರು ಶಿವಕುಮಾರ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಾರೆ.