ಮೈಸೂರು: ಮಲೆ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಗಡಿ ಪ್ರದೇಶದಲ್ಲಿ ಮೂರು ಜನರ ಸಾವಿಗೆ ಕಾರಣವಾಗಿದ್ದ ಸಲಗವನ್ನು ದಸರಾ ಆನೆಗಳ ಸಹಾಯದಿಂದ ಮೂರು ದಿನದ ಕಾರ್ಯಾಚರಣೆ ನಂತರ ಇಂದು ಸೆರೆ ಹಿಡಿಯಾಲಾಗಿದೆ.
ಕಳೆದ ವಾರ ಹನೂರು ಬಳಿಯ ಗ್ರಾಮವೊಂದಕ್ಕೆ ನುಗ್ಗಿದ ಈ ನರಹಂತಕ ಒಂಟಿ ಸಲಗ ಲೈಟಯ ಕಂಬ, ಮನೆ ಹಾಗೂ ಟ್ರಾಕ್ಟರ್ ಅನ್ನು ಧ್ವಂಸಗೊಳಿಸಿ ಒಬ್ಬನ ಮೇಲೆ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಸಾಯಿಸಿತ್ತು. ಅಲ್ಲದೆ ರಾಮಪುರದ ಬಳಿಯ ತಮಿಳುನಾಡು ಭಾಗದಲ್ಲಿ ಕಳೆದ ತಿಂಗಳು ಇದೇ ಆನೆ ಇಬ್ಬರ ಮೇಲೆ ಹಲ್ಲೆ ನಡೆಸಿ ಅವರನ್ನು ಸಹ ಸಾಯಿಸಿತ್ತು.
ಈ ಹಿನ್ನಲೆಯಲ್ಲಿ ದಸರಾ ಆನೆಗಳಾದ ಅರ್ಜುನ, ಅಭಿಮನ್ಯು, ಹರ್ಷ ಹಾಗೂ ಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ಮೂರು ದಿನಗಳ ನಿರಂತರ ಕಾರ್ಯಾಚರಣೆ ಹಮ್ಮಿಕೊಂಡ ಅರಣ್ಯಾಧಿಕಾರಿಗಳು ಇಂದು ಬೆಳಗ್ಗೆ ರಾಮಪುರದ ಬಳಿಯ ಹೊಂಗೆ ಹಳ್ಳದ ಬಳಿ ಅರವಳಿಕೆ ಮದ್ಧು ನೀಡಿ ಸೆರೆ ಹಿಡಿಯಲಾಗಿದ್ದು, ಸೆರೆ ಹಿಡಿದ ಆನೆಯನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದರು.