ಮೈಸೂರು: ಮೈಸೂರು ರಾಜ ಮನೆತನದ ನೂತನ ಮಹಾರಾಜ ಯಧುವೀರ್ ಮದುವೆ ಮೇ 8 ಅಥವಾ 18 ಕ್ಕೆ ಐದು ದಿನಗಳ ಕಾಲ ಮೈಸೂರು ಅರಮನೆಯಲ್ಲಿ ನಡೆಸಲು ಸಿದ್ಧತೆಗಳು ಆರಂಭವಾಗಿದ್ದು, ಶೃಂಗೇರಿ ಶ್ರೀಗಳ ಸೂಚನೆಗಾಗಿ ಕಾಯಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅರಮನೆ ಮೂಲಗಳು ಖಚಿತಪಡಿಸಿವೆ.
ಕಳೆದ ವರ್ಷ ಫೆಬ್ರವರಿ ಮೈಸೂರು ಸಂಸ್ಥಾನಕ್ಕೆ ಯಧುವೀರರನ್ನು ದತ್ತು ಪಡೆದು ನಂತರ ಮೇ ತಿಂಗಳಿನಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜರಾಗಿ ಪಟ್ಟಾಭಿಷೇಕ ನಡೆಸಲಾಯಿತು. ಆಗ ಯಧುವೀರ್ ಗೆ ಶ್ರೀ ಯಧುವೀರ ಕೃಷ್ಣಚಾಮರಾಜ ಒಡೆಯರ್ ಎಂದು ನಾಮಕರಣ ಮಾಡಲಾಯಿತು. ಮೈಸೂರು ಮಹಾಸಂಸ್ಥಾನದ ನೂತನ ಮಹಾರಾಜರಾದ ಶ್ರೀ ಯಧುವೀರ್ ಈಗಾಗಲೇ ರಾಜಸ್ಥಾನದ ದುಂಗಾಪುರದ ರಾಜವಶಂಸ್ಥೆಯಾದ ತ್ರಿಶಿಕಾ ಕುಮಾರಿ ಜತೆ ನಿಶ್ಚಿತಾರ್ಥ ಸಹ ನಡೆದಿದ್ದು, ತ್ರಿಶಿಕಾ ಕುಮಾರಿ ಮಹಾರಾಜರ ಪಟ್ಟಾಭಿಷೇಕದಲ್ಲಿ ಪಾಲ್ಗೊಂಡಿದ್ದು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಮೇ ತಿಂಗಳ 8 ಅಥವಾ 18 ನೇ ತಾರೀಖು ಮಹಾರಾಜ್ ಯಧುವೀರರ ಮದುವೆಗೆ ಸಿದ್ಧತೆಗಳು ಆರಂಭವಾಗಿದ್ದು ಈ ಹಿನ್ನಲೆಯಲ್ಲಿ ಮಹಾರಾಣಿಯವರು ಫೆಬ್ರವರಿ 15 ರಂದು ಅರಮನೆಯಲ್ಲಿ ರಾಜಪುರೋಹಿತರ ಸಭೆ ನಡೆಸಿದ್ದು ಸಭೆಯಲ್ಲಿ ಯಧುವೀರರ ಅದ್ದೂರಿ ಮದುವೆಗೆ ಯಾವ್ಯಾವ ರೀತಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕು ಎಂಬ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ. ಯಧುವೀರ್ ಮದುವೆಯು ಮೈಸೂರಿನ ಅಂಬಾ ವಿಲಾಸ ಅರಮನೆ ಮದುವೆ ಮಂಟಪದಲ್ಲಿ ಅದ್ದೂರಿಯಾಗಿ ಐದು ದಿನಗಳ ನಡೆಯಲಿದ್ದು, ಅಂದು ಐದು ದಿನಗಳ ಕಾಲ ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ದೇಶದ ಇತರ ಗಣ್ಯಾತೀಗಣ್ಯರು ಮದುವೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಅರಮನೆ ಮೂಲಗಳು ಖಚಿತಪಡಿಸಿವೆ.