ಮೈಸೂರು: ಗಂಡನ ಮೇಲೆ ಸುಳ್ಳು ಕೇಸ್ ದಾಖಲಿಸಿ ಕುಟುಂಬನ್ನೇ ಕೋರ್ಟ್ ಗೆಳೆದ ಸಾಲಗಾರನ ಕಿರುಕುಳದಿಂದ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ಕೋರ್ಟ್ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಹೃದಯಾವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಕೆರೆ ಹೋಬಳಿಯ ಬೂಚನಹಳ್ಳಿ ಗ್ರಾಮದ ಬಲರಾಮೇಗೌಡರು 75 ಸಾವಿರ ಅಸಲು ಹಾಗೂ ಬಡ್ಡಿ 75 ಸಾವಿರ ನೀಡಬೇಕೆಂದು ಬೂಚನಹಳ್ಳಿ ಗ್ರಾಮದ ತಿಮ್ಮೇಗೌಡ ಹುಣಸೂರು ತಾಲೂಕು ಕೋರ್ಟ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪ್ರೋನೋಟ್ ಕೇಸ್ ದಾಖಲಿಸಿದ್ದರು. ಆದರೆ ಕೇಸ್ ಸಂಬಂಧ ಯಾವುದೇ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಬಲರಾಮೇಗೌಡರಿಗೆ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ 2 ವರ್ಷಗಳಿಂದ ಬಲರಾಮೇಗೌಡ ಹಾಗೂ ಪತ್ನಿ ಮಂಗಳಮ್ಮ ತಿಮ್ಮೇಗೌಡನ ಕಾಟಕ್ಕೆ ಹೆದರಿ ಊರನ್ನೇ ತೋರಿದಿದ್ದರು. ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಮಂಗಳಮ್ಮನ ಕೆಲಸಕ್ಕೂ ತೊಂದರೆ ಮಾಡಿ ಕಿರುಕುಳ ನೀಡಿದ್ದನು ಎನ್ನಲಾಗಿದೆ.
ಅತ್ತ ಕೋರ್ಟ್ ನಿಂದ ವಾರೆಂಟ್ ಜಾರಿಯಾಗುತ್ತಿದ್ದಂತೆ 10 ರೂ ಬಡ್ಡಿ ಸಾಲಕ್ಕೆ 30 ಸಾವಿರ ಹಣವನ್ನು ಹೊಂದಿಸಿಕೊಂಡು ನ್ಯಾಯಾಲಯದಲ್ಲಿ ಹೂಡಿರುವ ಕೇಸ್ ವಿಚಾರಣೆ ನಡೆಸಲು ಖರ್ಚು ಆಗಿತ್ತು. ಈ ಹಿನ್ನಲೆಯಲ್ಲಿ ಮನನೊಂದಿದ್ದ ಮಂಗಳಮ್ಮ ಹುಣಸೂರಿನ ತಾಲೂಕಿನ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದ ವೇಳೆ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು, ಕೋರ್ಟ್ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು.
ಕೊನೆಗೆ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಡೆತ್ ನೋಟ್ ನಲ್ಲಿ ತಿಮ್ಮೇಗೌಡರಿಂದ ಆದ ಕಿರುಕಳವನ್ನು ಹೇಳಿಕೊಂಡಿರುವ ಮಂಗಳಮ್ಮ ಲಿಖಿತ ಆಧಾರದ ಮೇಲೆ ಹುಣಸೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ತಿಮ್ಮೇಗೌಡರ ಪತ್ತೆಗೆ ಶೋಧಕಾರ್ಯ ಆರಂಭಿಸಿದ್ದಾರೆ.