ಮೈಸೂರು: ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ ತೆಗೆದಿದ್ದಕ್ಕೆ ಗುಂಪನ್ನು ಕಟ್ಟಿಕೊಂಡು ಕಾರ್ಖಾನೆಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ ಘಟನೆ ಇಲವಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ ಇಲವಾಲ ಹೋಬಳಿಯ ನಾಗವಾಲ ರಸ್ತೆಯಲ್ಲಿರುವ ತನುರ್ ಪ್ರಾಟ್ರಿ ಕಾರ್ಕಾನೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಮಹದೇವನ ದುರ್ನಡತೆಯನ್ನು ಕಂಡು ಕೆಲ ದಿನಗಳ ಹಿಂದೆ ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ರೊಚ್ಚಿಗೆದ್ದ ಮಹದೇವ, ತನ್ನ ಕುಡುಕ, ಪುಂಡ ಸ್ನೇಹಿತರೊಟ್ಟಿಗೆ ಕಂಠಪೂರ್ತಿ ಕುಡಿದು ಕಾರ್ಖಾನೆಗೆ ನುಗ್ಗಿ, ರಾತ್ರಿ ಪಾಳಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಕಾರ್ಖಾನೆಯ ಗಾಜು ಪುಡಿಪುಡಿ ಮಾಡಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ.
ಈ ದುಷ್ಕೃತ್ಯದ ದೃಶ್ಯಾವಳಿ ಕಾರ್ಖಾನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಕಾರ್ಖಾನೆ ಮಾಲೀಕ ದಿವ್ಯಾನಂದ್ ಇಲವಾಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.