ಮೈಸೂರು: ಮನೆಕಟ್ಟಲು ಬ್ಯಾಂಕಿನಿಂದ ಹಣ ಡ್ರಾ ಮಾಡಿದ ರೈತನನ್ನು ಅಪಹರಿಸಿದ ದುಷ್ಕರ್ಮಿಗಳು ಆತನಿಂದ 1.20 ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಸಿದ್ಧಾರ್ಥ ಬಡಾವಣೆಯಲ್ಲಿ ಬಳಿ ನಡೆದಿದೆ.
ಮೈಸೂರಿನ ಕುಪ್ಪೇಗಾಲದ ಗ್ರಾಮದ ನಿವಾಸಿ ರೈತ ರಂಗಸ್ವಾಮಿಯವರೇ ಹಣ ಕಳೆದುಕೊಂಡವರಾಗಿದ್ದು, ತಮ್ಮ ಗ್ರಾಮದಲ್ಲಿ ಮನೆ ನಿರ್ಮಿಸುತ್ತಿರುವ ಇವರು ಕಳೆದ 2 ವರ್ಷಗಳಿಂದ ಬ್ಯಾಂಕಿನಲ್ಲಿ ಹಣ ಕೂಡಿಟ್ಟಿದ್ದರು. ಕೊನೆಗೆ ಮನೆ ನಿರ್ಮಾಣಕ್ಕೆಂದು ಸಿದ್ಧಾರ್ಥ ಬಡಾವಣೆಯಲ್ಲಿರುವ ಕರ್ನಾಟಕ ಬ್ಯಾಂಕ್ ನಲ್ಲಿ ಹಣ 1.20 ಲಕ್ಷ ಹಣ ಡ್ರಾ ಮಾಡಿದ್ದಾರೆ.
ರೈತ ರಂಗಸ್ವಾಮಿ ಹಣ ಡ್ರಾ ಮಾಡುವುದನ್ನೇ ಗಮನಿಸಿದ್ದ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಬಂದಿದ್ದಾರೆ. ಸಂಗೀತ ಕಾರ್ನರ್ ಬಳಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ರೈತನಿಗೆ ಡ್ರಾಪ್ ಕೊಡುವುದಾಗಿ ಕರೆದಿದ್ದಾರೆ. ರೈತ ಇಲ್ಲ ನಾನು ನಡೆದುಕೊಂಡೇ ಹೋಗುತ್ತೇನೆ ಎಂದಿದ್ದಾರೆ. ಅಷ್ಟಕ್ಕೆ ರೈತನನ್ನು ಅಡ್ಡಗಟ್ಟಿ ಅಪಹರಿಸಿ ಲಲಿತ್ ಮಹಲ್ ಹೆಲಿಪ್ಯಾಡ್ ನ ಮೈದಾನದ ನಿರ್ಜನ ಪ್ರದೇಶಕ್ಕೆ ಕರೆದೋಗಿದ್ದಾರೆ.
ರೈತನಿಂದ 1.20 ಲಕ್ಷ ರೂ ಹಣ ಒಂದು ಮೊಬೈಲ್ ಹಾಗೂ ಬ್ಯಾಂಕ್ ಪಾಸ್ ಬುಕ್ ಅನ್ನು ಕಿತ್ತುಕೊಂಡು ದೊಣ್ಣೆಯಿಂದ ಥಳಿಸಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ರಂಗಸ್ವಾಮಿ ನಜರ್ಬಾದ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.