ಮೈಸೂರು: ಸಿಎಂ ತನ್ನ ಪತ್ನಿಗಾಗಿ ಖರೀದಿಸಿದ ಮೈಸೂರು ಸಿಲ್ಕ್ ಸೀರೆಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಈಗ ಮಹಿಳೆಯರ ಚಿತ್ತ ಮೈಸೂರು ಸಿಲ್ಕ್ ಸೀರೆ ಕಡೆಗೆ ವಾಲಿದೆ.
ದಾವಣಗೆರೆಯಲ್ಲಿ ಮೈಸೂರು ಸಿಲ್ಕ್ ಹೊಸ ಶೋರೂಮ್ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ನಂತರ ತಮ್ಮಪತ್ನಿ ಪಾರ್ವತಿ ಸಿದ್ಧರಾಮಯ್ಯನವರಿಗೆ ಮೊದಲ ಬಾರಿಗೆ 1,09,885 ರೂ ಮೌಲ್ಯದ ಚಿನ್ನದ ಜರಿಯುಳ್ಳ ರೇಷ್ಮೆ ಸೀರೆಯನ್ನು ಕೊಂಡು ಸುದ್ದಿಯಾಗಿದ್ದರು. ಅನಂತರ ಈ ಸುದ್ದಿ ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ 1,09,885 ರೂ ಬೆಲೆ ಕೆ-7 ಎಓಡಿ ಸೀರೆಯು 750 ಗ್ರಾಂ ಗೋಲ್ಡ್ ದಾರಗಳನ್ನು ಹೊಂದಿದ್ದು, ಒಂದು ದಿನಕ್ಕೆ ಒಂದೆ ಸೀರೆಯನ್ನು ಮಾತ್ರ ತಯಾರು ಮಾಡಲಾಗುತ್ತದೆ. ಕನಿಷ್ಠ ತಿಂಗಳಿಗೆ 20 ಸೀರೆಗಳನ್ನು ಉತ್ಪಾದಿಸಲಾಗುತ್ತಿದ್ದು, ಇದನ್ನು ಮದುವೆ ಸೀಸನ್ ಇರುವ ತಿಂಗಳಲ್ಲಿ ಮಾತ್ರ ತಯಾರು ಮಾಡಲಾಗುತ್ತಿದ್ದು, ತಿಂಗಳಲ್ಲಿ 16 ಸೀರೆಗಳು ಖರೀದಿಯಾಗುತ್ತಿವೆ. ಅಲ್ಲದೆ ಮದುವೆ ಹಾಗೂ ಇತರ ಶುಭ ಸಮಾರಂಭಗಳಿರುವ ತಿಂಗಳಲ್ಲಿ ಶೇ.25 ರಷ್ಟು ವಿಶೇಷ ರಿಯಾಯಿತಿ ಕೊಡಲಾಗುವುದು. ಅದರಂತೆ ಸಿಎಂ ಸಿದ್ದರಾಮಯ್ಯ ಖರೀದಿಸಿದ ಸೀರೆಗೆ ವಿಐಪಿ ರಿಯಾಯಿತಿ ನೀಡಲಾಗಿದೆ. ಅವರಿಂದ 88,414 ರೂಪಾಯಿ ಹಣವನ್ನು ಪಡೆಯಲಾಗಿದೆ ಎಂದು ಮೈಸೂರು ಸಿಲ್ಕ್ ಸ್ಪಷ್ಟಪಡಿಸಿದ್ದು, ಆದರೆ ಸಿಎಂ ಯಾವ ರೀತಿಯ ಹಣ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ನೀಡಲು ಸಿಲ್ಕ್ ಬೋರ್ಡ್ ನಿರಾಕರಿಸಿದೆ.