ಮೈಸೂರು: ಸ್ವಚ್ಛ ನಗರಿ ಮೈಸೂರು ನಗರಪಾಲಿಕೆ ನಗರದ ಪ್ರಮುಖ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದು ಈಗ ಚರ್ಚೆಗೆ ಗ್ರಾಸವಾಗಿದ್ದು ಕೆಲವರು ಪೇ ಅಂಡ್ ಪಾರ್ಕಿಂಗ್ ಗೆ ಒಲವು ಮತ್ತೆ ಕೆಲವರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ನಗರ ಪ್ರದೇಶದ ಜನಸಂಖ್ಯೆ 10 ಲಕ್ಷ ದಾಟಿದೆ. ದಿನದಿಂದ ದಿನಕ್ಕೆ ಇಲ್ಲಿನ ವಾಹನ ದಟ್ಟಣಿ ಕೂಡ ಹೆಚ್ಚುತ್ತಿದ್ದು, 7 ಲಕ್ಷಕ್ಕೂ ಹೆಚ್ಚಿನ ವಾಹನಗಳಿದ್ದು, ಅವುಗಳಲ್ಲಿ ಶೇ.80 ರಷ್ಟು ದ್ವಿಚಕ್ರವಾಹನಗಳೇ ಆಗಿವೆ. ಈ ಹಿನ್ನಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ನಗರದಲ್ಲಿ ವಾಹನ ಸಂಚಾರ ದಟ್ಟಣೆ, ಪಾರ್ಕಿಂಗ್ ವವಸ್ಥೆ ಕಷ್ಟವಾಗುತ್ತಿದ್ದು, ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿ ಪಾರ್ಕಿಂಗ್ ಗೆ ಸ್ಥಳಾವಕಾಶವೇ ಇಲ್ಲ ಎಂಬಂತಾಗಿದೆ.
ಇದಕ್ಕಾಗಿಯೇ ಸ್ವಚ್ಛನಗರಿಯ ಕಿರೀಟ ಪಡಿದಿರುವ ಮೈಸೂರು ಮಹಾನಗರ ಪಾಲಿಕೆ 2012 ರ ನಿರ್ಣಯದಂತೆ ಪ್ರಾಥಮಿಕ ಹಂತದಲ್ಲಿ ಪ್ರಮುಖ ಮೂರು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಆದರೆ ಪೇ ಅಂಡ್ ಪಾರ್ಕಿಂಗ್ ಹೆಸರಿನಲ್ಲಿ ಹಣ ವಸೂಲಿ ದಂಧೆಯಾಗದೇ ಸೌಕರ್ಯ ಕಲ್ಪಿಸಿಕೊಡುವ ಜನಪರ ಕಾಳಜಿಯಂತಾಗಲಿ ಎಂಬುದು ಕೆಲವರ ಅಭಿಪ್ರಾಯವಾದರೆ, ಇನ್ನೂ ಕೆಲವರು ಪೇ ಅಂಡ್ ಪಾರ್ಕಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಮೈಸೂರಿಗೆ ಪೇ ಅಂಡ್ ಪಾರ್ಕಿಂಗ್ ಹೊಸದೆನಲ್ಲಾ ಇದು ಮೈಸೂರಿನಲ್ಲಿ 30 ವರ್ಷಗಳ ಹಿಂದೆಯೇ ಜಾರಿಯಲ್ಲಿದೆ ಎನ್ನುತ್ತಾರೆ ಇಲ್ಲಿನ ಗುತ್ತಿಗೆದಾರರೊಬ್ಬರು. 1980 ರಲ್ಲಿಯೇ ಮೈಸೂರಿನ ಅರಮನೆ ದ್ವಾರಗಳಲ್ಲಿ, ಟಾಕೀಸ್ ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆ ನಿಲ್ದಾಣಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಆದರೆ ದಿನಕಳೆದಂತೆ ಅವುಗಳಲ್ಲಿ ಕೆಲವೆಡೆ ಇಂದಿಗೂ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದ್ದರೆ, ಕೆಲವೆಡೆ ಸಾರ್ವಜನಿಕರ ಆಕ್ರೋಶದಿಂದ ರದ್ದಾಗಿದೆ.
ಆದರೂ ಸಹ ಜನ ಸಾಮಾನ್ಯರಿಗೆಟುಕುವ ದರದಲ್ಲಿ ಲಾಭಕ್ಕಲ್ಲದೆ ಸಾರ್ವಜನಿಕರ ವಾಹನಗಳ ಭದ್ರತೆ ಹಾಗೂ ಬದ್ಧತೆ, ಸುವ್ಯವಸ್ಥೆಯ ದೃಷ್ಟಿಯಿಂದ ಸಾಮಾಜಮುಖಿ ಪೇಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿದರು ಈಗಲೂ ಜನ ಒಪ್ಪುತ್ತಾರೆ. 30 ವರ್ಷಗಳ ಹಿಂದೆ ಪೇ ಅಂಡ್ ಪಾರ್ಕಿಂಗ್ ಜಾರಿಗೊಳಿಸಿದ ಸಂಧರ್ಭದಲ್ಲಿ ಕೆಲವೊಂದು ವಿರೋಧಗಳು ಹುಟ್ಟಿಕೊಂಡವು. ಆದರೆ ನಮ್ಮ ಕಾರ್ಯವೈಖರಿ ನೋಡಿ ಎಷ್ಟೊ ಮಂದಿ ನಮಗೆ ಸಹಕರಿಸಿದ ಮೈಸೂರಿಗರು ಇದ್ದಾರೆ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.
ಸದ್ಯಕ್ಕೆ ಮೈಸೂರಿನ ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆಗಳಲ್ಲಿ ಮಾಸಾಂತ್ಯಕ್ಕೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಅಲ್ಲದೆ ಸಾರ್ವಜನಿಕರ ಹಿತ ದೃಷ್ಟಿಯಿಂದಲೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುತ್ತಿರುವುದಾಗಿ ಮೇಯರ್ ಬೈರಪ್ಪ ಸ್ಪಷ್ಟಪಡಿಸಿದ್ದಾರೆ.
ತೀವ್ರ ವಿರೋಧ, ಪ್ರತಿಭಟನೆ
ಮಹಾನಗರ ಪಾಲಿಕೆ ಜಾರಿಗೊಳಿಸಲು ಮುಂದಾಗಿರುವ ಪೇ ಅಂಡ್ ಪಾರ್ಕಿಂಗ್ ಗೆ ತೀವ್ರವಾದ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಮೈಸೂರು ಕನ್ನಡ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಮಹಾನಗರ ಪಾಲಿಕೆ ನಿರ್ಧಾರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆಯ ಪೇ ಅಂಡ್ ಪಾರ್ಕಿಂಗ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಸಿಐಸಿಎಂ ಸಂಘಟನೆಯ ಸಂಚಾಲಕ ಪೇ ಅಂಡ್ ಪಾರ್ಕಿಂಗ್ ಕಾನೂನು ಬಾಹಿರ ಎಂದಿದ್ದಾರೆ.
ಅಲ್ಲದೆ ಕರ್ನಾಟಕ ಮುನ್ಸಿಫಲ್ ಆಕ್ಟ್ 288 ಎ ಸಬ್ ಕ್ಲಾಸ್ 5 ರ ಪ್ರಕಾರ ರಸ್ತೆ ಸಾರ್ವಜನಿಕರ ಸ್ವತ್ತು. ರಸ್ತೆಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಲು ಬರುವುದಿಲ್ಲ. ಪಾಲಿಕೆಗೆ ಸೇರಿದ ಆಸ್ತಿಯಲ್ಲಿ ಮಾತ್ರ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಬಹುದಾಗಿದ್ದು, ಮೇಯರ್ ನಗರದ 15 ಪ್ರಮುಖ ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಹೊರಟಿದ್ದು, ಇದು ಕಾನೂನು ಬಾಹಿರ ಎಂದು ಮನದಟ್ಟು ಮಾಡಲಾಗಿದೆ. ಹಾಗೊಂದು ವೇಳೆ ಜಾರಿ ಮಾಡಿದರೆ ನಾಗರೀಕರ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.