ಮೈಸೂರು: ರಸ್ತೆಯಲ್ಲಿ ಒಂದು ಪೂಜಿಸಿದ ನಿಂಬೆ ಹಣ್ಣು ಕಂಡರೇ ಸಾಕು ದೂರು ಹೋಗುವ ಹೆಣ್ಣು ಮಕ್ಕಳೇ ಇರುವ ಈ ಕಾಲದಲ್ಲಿ ಇಲ್ಲೊಬ್ಬ ಧೈರ್ಯವಂತ ಮಹಿಳೆ ಕಳೆದ 15 ವರ್ಷದಿಂದ ಸ್ಮಶಾನ ಕಾಯುವುದನ್ನೇ ಕಾಯಕ ಮಾಡಿಕೊಂಡ ಆಧುನಿಕ ಹರಿಶ್ಚಂದ್ರೆಯ ಮಹಿಳೆ.
ಮೈಸೂರಿನ ವಿದ್ಯಾರಣ್ಯಪುರಂ ನಗರದ ನಿವಾಸಿ ನೀಲಮ್ಮ ಎಂಬಾಕೆ ಸ್ಮಶಾನವಾಸಿ ದಿಟ್ಟ ಮಹಿಳೆಯಾಗಿದ್ದು, ಕಳೆದ 15 ವರ್ಷದಿಂದ ಈಕೆ ಸ್ಮಶಾನವನ್ನೇ ತಮ್ಮ ವಾಸ ಸ್ಥಾನವಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ ಸ್ಮಶಾನಕ್ಕೆ ಬರುವ ಹೆಣಗಳಿಗೆ ಗುಂಡಿ ತೋಡುವುದು ಸೇರಿದಂತೆ ಅಂತಿಮ ಸಂಸ್ಕಾರದ ಎಲ್ಲಾ ಕಾರ್ಯವನ್ನು ಮುಂದೆ ನಿಂತು ಮಾಡುವುದೇ ಈಕೆಯ ನಿತ್ಯದ ಕಾಯಕವಾಗಿದೆ.
ನಗರದ ಪದ್ಮ ಥಿಯೇಟರ್ ನಲ್ಲಿ ಟಿಕೆಟ್ ಕೊಡುತ್ತಿದ್ದ ಬಸವರಾಜು ಎಂಬುವವರ ಪತ್ನಿಯೇ ನೀಲಮ್ಮ. ಒಮ್ಮೆ ವೀರಶೈವ ಸಂಘದವರು ತಮ್ಮ ಜನಾಂಗದ ರುದ್ರಭೂಮಿಯಲ್ಲಿ ಕೆಲಸ ಮಾಡುವವರನ್ನು ಹುಡುಕುತ್ತಿದ್ದಾಗ ಥಿಯೇಟರ್ ನಲ್ಲಿ ಕೆಲಸ ಬಿಟ್ಟು ಹೆಣ ಹೂಳುವ ಕಾಯಕಕ್ಕೆ ಬಂದವರೇ ಬಸವರಾಜು ಅಂದು ರುಧ್ರಭೂಮಿಯಲ್ಲೇ ವಾಸಕ್ಕೆ ಮನೆಯನ್ನು ನಿರ್ಮಾಣ ಮಾಡಿಕೊಂಡು ತಾವೇ ಸ್ಮಶಾನದಲ್ಲಿ ಹೂಳುವ ಕಾಯಕವನ್ನು ಮಾಡುತ್ತಾ ಬಂದಿದ್ದರು ಬಸವರಾಜು.
ಆದರೆ ಕಳೆದ 15 ವರ್ಷದ ಹಿಂದೆ ಬಸವರಾಜು ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಬಸವರಾಜುವಿನ ಸ್ಥಾನಕ್ಕೆ ಬಂದ ವಿಧವೆ ನೀಲಮ್ಮ ಗಂಡ ಮಾಡುತ್ತಿದ್ದ ಹೂಳುವ ಕಾಯಕವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅಂದಿನಿಂದ ಶವವನ್ನು ಹೂಳಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿಕೊಡುತ್ತಾಳೆ. ಒಂದು ಶವವನ್ನು ಹೂಳಲು 600 ಪಡೆಯುವ ಈಕೆ ದಿನವೊಂದಕ್ಕೆ ಎರಡು ಶವ ಸಂಸ್ಕಾರವನ್ನು ನಡೆಸುತ್ತಾ ಬಂದಿದ್ದಾಳೆ. ಯಾವುದೇ ಅಳುಕಿಲ್ಲದೆ ಬದುಕನ್ನೇ ಸ್ಮಶಾನದಲ್ಲಿ ಸಾಗಿಸುತ್ತಿರುವ ಈಕೆಗೆ ಒಬ್ಬ ಮಗನಿದ್ದು ಆತನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಸೊಸೆ ಮನೆಯಲ್ಲಿದ್ದಾಳೆ.
ತನ್ನ ಕಾಯಕದ ಬಗ್ಗೆ ಕೊಂಚವು ಅಂಜಿಕೆ ವ್ಯಕ್ತಪಡಿಸದ ನೀಲಮ್ಮ ಮಾತನಾಡಿ ಹೇಳಿದಿಷ್ಟು ಹುಟ್ಟು ಆಕಸ್ಮಿಕ ಸಾವು ಖಚಿತ ಎಂದ ಮೇಲೆ ಹುಟ್ಟಿದ ಮನುಷ್ಯ ಒಂದಲ್ಲಾ ಒಂದುದಿನ ಸಾಯಲೇ ಬೇಕು. ಆಗಿದ್ದಾಗ ನಾವೆಲ್ಲರೂ ಒಂದು ದಿನ ಸಾಯಲೆಬೇಕು. ಹೀಗಿದ್ದಾಗ ಭಯವೇಕೆ ಇಂತಹ ಹೆಣ ಹೂಳುವ ಕಾಯಕದ ಬಗ್ಗೆ ನನಗೆ ಸಂತೋಷವಿದೆ. ಸ್ಮಶಾನದಲ್ಲಿ ವಾಸವಿರಲು ಯಾವುದೇ ಭಯವಿಲ್ಲ ಎಂದೆನ್ನುವ ಧೈರ್ಯವಂತೆ ನೀಲಮ್ಮ ಆಧುನಿಕ ಹರಿಶ್ಚಂದ್ರೆ ಎನಿಸಿಕೊಂಡಿದ್ದಾರೆ.