ಮೈಸೂರು: ಸೋಮವಾರದ ಶಿವರಾತ್ರಿ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಂಡಿದ್ದು ಅದರಲ್ಲೂ ಮಹಾರಾಜರು ನಿರ್ಮಿಸಿದ ಅರಮನೆಯ ತ್ರಿನೇಶ್ವರನಿಗೆ ಶಿವರಾತ್ರಿಯ ವಿಶೇಷ ಚಿನ್ನದ ಕೊಳಗ ತೊಡಿಸಲು ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
1953 ರಲ್ಲಿ ಮೈಸೂರು ಮಹಾ ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಮಕ್ಕಳ ಪ್ರೀತ್ಯರ್ಥವಾಗಿ ಅರಮನೆಯ ಆವರಣದಲ್ಲಿರುವ ತ್ರೀನೇಶ್ವರನಿಗೆ, ನಂಜನಗೂಡಿನ ನಂಜುಂಡೇಶ್ವರನಿಗೆ, ಹಾಗೂ ಮಲೆ ಮಹದೇಶ್ವರ ದೇವಾಲಯಗಳ ಮೂರ್ತಿಗೆ ಚಿನ್ನದ ಮುಖವಾಡವನ್ನು ಕೊಡುಗೆಯಾಗಿ ನೀಡಿದ್ದಾರೆ.
ಅರಮನೆ ಆವರಣದಲ್ಲಿರುವ ತ್ರಿನೇಶ್ವರನಿಗೆ ತೊಡಿಸಿರುವ ಚಿನ್ನದ ಕೊಳಗ 11 ಕೆಜಿ ತೂಕವಿದ್ದು, ಸಂಪೂರ್ಣ ಚಿನ್ನದಾಗಿದೆ. ಮಹಾನ್ ಭಕ್ತರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ನಿತ್ಯ ಶಿವನಿಗೆ ಪೂಜೆ ಸಲ್ಲಿಸುತ್ತಿದ್ದರು. ರಾಜರ ಕಾಲದಲ್ಲಿ ತ್ರಿನೇಶ್ವರನಿಗೆ ನಿತ್ಯ ಚಿನ್ನದ ಮುಖವಾಡ ಧರಿಸುತ್ತಿದದ್ದು ಅಂದಿನ ವಿಶೇಷ.
ಆದರೆ ರಾಜಾಳ್ವಿಕೆ ಮುಗಿದ ನಂತರ ಅರಮನೆ ದೇವಾಲಯಗಳು ಮುಜರಾಯಿ ಇಲಾಖೆಗೆ ಒಳಪಟ್ಟ ಬಳಿಕ ಶಿವರಾತ್ರಿಯ ದಿನದಂದು ಮಾತ್ರ ಖಜಾನೆಯಿಂದ ಹೊರತಂದು ತ್ರಿನೇಶ್ವರನಿಗೆ ಮುಖವಾಡ ಧರಿಸುವುದು ವಿಶೇಷವಾಗಿದೆ. ಅದರಂತೆ ಸೋಮವಾರ ನಡೆಯುವ ನಡೆಯುವ ಶಿವರಾತ್ರಿ ಹಿನ್ನಲೆಯಲ್ಲಿ ಇಂದು ಶಿವನ ಕೊಳವನ್ನು ಶುಚಿಗೊಳಿಸಿ ಜೋಡಿಸಿ ಶಿವರಾತ್ರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸೋಮವಾರ ಮುಂಜಾನೆ 5.30 ರ ಶುಭ ಲಗ್ನದಲ್ಲೇ ತ್ರಿನೇಶ್ವನಿಗೆ ಚಿನ್ನದ ಮುಖವಾಡ ಧಾರಣೆ ನಡೆದಿದ್ದು, ಬಳಿಕ ಅಭಿಷೇಕ, ಅರ್ಚನೆ ನಡೆಯಿತು. ಬಳಿಕ ಮೊದಲ ಪೂಜೆಗೆ ರಾಜಮನೆತನದಿಂದ ಶ್ರೀ ಮಹಾರಾಜ ಯಧುವೀರ ಕೃಷ್ಣದತ್ತ ಚಾಮರಾಜ ಓಡೆಯರ್ ಹಾಗೂ ರಾಜಮಾತೆಯಾದ ಪ್ರಮೋದದೇವಿ ಒಡೆಯರ್ ಅವರು ಸಹ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳ್ಳಗ್ಗೆಯಿಂದ ರಾತ್ರಿವರೆಗೆ ಲಕ್ಷಾಂತರ ಭಕ್ತರು ಕೊಳಗ ಧಾರಣೆಯಾದ ತ್ರಿನೇಶ್ವರನ ವೀಕ್ಷಣೆ ಮಾಡಲಿದ್ದಾರೆ.