ಮೈಸೂರು: ಗಲಾಟೆಗಳಿಂದಲೇ 20 ವರ್ಷಗಳಿಂದ ದೇವಸ್ಥಾನಕ್ಕೆ ಬೀಗ ಹಾಕಿ ಗಣೇಶನನ್ನು ಕೂಡಿ ಹಾಕಿದ ಎರಡು ಗುಂಪುಗಳ ಮನವೊಲಿಸಿ ರಾಜೀ ಮೂಲಕ ಕೊನೆಗೂ ಗಣೇಶನನ್ನು ಬಂಧ ಮುಕ್ತಗೊಳಿಸಿದ ಘಟನೆ ಇಲ್ಲಿನ ಉದಯಗಿರಿಯಲ್ಲಿ ನಡೆದಿದೆ.
ಗಣೇಶನ ದೇವಾಲಯ ಪೂಜೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಹಿನ್ನಲೆಯಲ್ಲಿ ಕೊನೆಗೆ ಗಣಪನ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. 20 ವರ್ಷಗಳಿಂದ ಹಲವು ಬಾರಿ ಗಣೇಶನ ದೇವಾಲಯದ ಬೀಗ ತೆಗೆದು ಹಲವಾರು ಮಂದಿ ಆತನನ್ನು ಪೂಜಿಸಲು ಪ್ರಯತ್ನಿಸಿದ್ದಾರೆ. ಆದರೆ ಆಗಲೂ ಸಹ ಒಂದಿಲ್ಲೊಂದು ಗಲಾಟೆ ನಡೆದು ಮತ್ತೇ ದೇವಾಲಯಕ್ಕೆ ಬೀಗ ಬೀಳುವುದೇ ಈ ದೇವಾಲಯದ ವಿಶೇಷ. ಅದಕ್ಕೆ ಈ ಗಣೇಶನನ್ನು ಗಲಾಟೆ ಗಣೇಶನ ದೇವಾಲಯವೆಂದೆ ಪ್ರಸಿದ್ಧಿ ಪಡೆದಿದೆ ಎನ್ನುತ್ತಾರೆ ಸ್ಥಳೀಯರೊಬ್ಬರು. 20 ವರ್ಷದ ಬಂಧನದ ಜತೆಗೆ ಗಲಾಟೆ ಗಣೇಶ ಎಂಬ ಬಿರುದಾಂಕಿತನಾದ ಗಣಪನೀಗ ಬಂಧನನಿಂದ ವಿಮುಕ್ತಗೊಂಡಿದ್ದಾನೆ. ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮುಖಂಡ, ಸ್ಥಳ ಜನಪ್ರತಿನಿಧಿಗಳು, ದೇವಾಸ್ಥಾನದ ಸುತ್ತಲ ನಿವಾಸಿಗಳು ಒಂದೆಡೆ ಸೇರಿ ಸಮಾಲೋಚನೆ ನಡೆಸಿ ದೇವಾಲಯ ತೆರೆದಿದ್ದಾರೆ.
ಎಲ್ಲರ ಒಮ್ಮತದಂತೆ ಗಲಾಟೆ ಗಣೇಶನನ್ನು ಮತ್ತೆ ಪೂಜಿಸಲು ಸಿದ್ಧತೆಗಳು ನಡೆಯುತ್ತಿದ್ದಂತೆ ಹಲವು ಭಕ್ತರು ಹಾಗೂ ದೇವಾಲಯದ ಸಮಿತಿ ಹಾಕಿದ್ದ ದೇವಾಲಯದ ಉದ್ಘಾಟನೆಯ ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ರಾತ್ರಿ ಕಿಡಿಗೇಡಿಗಳ ಗುಂಪೊಂದು ಹರಿದು ಹಾಕಿ ಗಲಾಟೆ ಮಾಡಿದ್ದಾರೆ. ಆದರೆ ಆದಾವುದಕ್ಕೂ ತಲೆ ಕಡೆಸಿಕೊಳ್ಳದ ಮಂದಿ 20 ವರ್ಷ ಬಳಿಕ ಮತ್ತೆ ಗಣಪನನ್ನೂ ಪೂಜಿಸಲು ಆರಂಭಿಸಿದ್ದಾರೆ. ಅದರಂತೆ ಗಣೇಶನ ಉತ್ಸವ ಮೂರ್ತಿಯನ್ನು ನಗರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವಿಶೇಷ ಪೂಜೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.