ಮೈಸೂರು: ಸಿನಿಮಾ, ಕಾಫಿಶಾಪ್ ಹೀಗೆ ಜನ ಜಂಗುಳಿಗಳಲ್ಲಿ ಹೈಟೆಕ್ ಮೊಬೈಲ್ ಗಳನ್ನು ಎಗರಿಸಿ ಐಎಂಎ ನಂಬರ್ ಬದಲು ಮಾಡಿ ನಕಲಿ ಬಿಲ್ ಮಾಡಿ ಮಾರಾಟ ಮಾಡುತ್ತಿದ್ದ ಐನಾತಿ ಹೈಟೆಕ್ ಮೊಬೈಲ್ ಕಳ್ಳನನ್ನು ಉದಯಗಿರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಅಸ್ಸಾಂನವನಾಗಿರುವ ನಗರದ ಎನ್.ಆರ್ ಮೊಹಲ್ಲಾದ ಸೂರಜ್(25) ಎಂಬಾತನೇ ತನ್ನದೊಂದು ಸಣ್ಣ ಗ್ಯಾಂಗ್ ನೊಟ್ಟಿಗೆ ಸೇರಿ ಹೈಟೆಕ್ ಮೊಬೈಲ್ ಕಳವು ಮಾಡಿ ಮಾರಟ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಐನಾತಿ ಕದೀಮನಾಗಿದ್ದಾನೆ. ಈತನ ಕಳವಿಗೆ ಸಹಾಯ ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಜಮೀರ್ ಪರಾರಿಯಾಗಿದ್ದಾನೆ. ಬಂಧಿತನಿಂದ ಒಟ್ಟು 6,05,000 ಬೆಲೆಬಾಳುವ 15 ಮೊಬೈಲ್, 2 ಟ್ಯಾಬ್ಲೆಟ್, 1 ಲ್ಯಾಪ್ಟ್ಯಾಪ್, 1 ಮಿರಾಕಲ್ ಬಾಕ್ಸ್, 2 ನಕಲಿ ಸೀಲು ಹಾಗೂ 2 ನಕಲಿ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಾಗಿ ಜನರು ಸೇರುವ ಮಾರ್ಕೆಟ್, ಮಾಲ್, ಸಿನಿಮಾ ಟಾಕೀಸ್ ಅದರಲ್ಲೂ ಹೈಫೈ ಮಂದಿ ಸೇರುವ ಜಾಗಗಳನ್ನೇ ಟಾರ್ಗೇಟ್ ಮಾಡುವ ಈ ಖದೀಮರ ಗುಂಪು ನಿತ್ಯ ಮೊಬೈಲ್ ಗಳನ್ನು ಎಗರಿಸಲಿದ್ದಾರೆ. ಬಳಿಕ ಲ್ಯಾಪ್ಟ್ಯಾಪ್ ಮೂಲಕ ಆಯಾ ಕಂಪನಿಗಳ ವೆಬ್ಸೈಟ್ ಬಳಸಿ ಮೊಬೈಲ್ ಐ-ಕ್ಲೌಡ್ ಲಾಕ್ ಆಗಿದೆ ಎಂದು ಸುಳ್ಳು ನೆಪ ಹೇಳಿ ನಂಬಿಸಿ ನಕಲಿ ಸೀಲಿನ ಬಿಲ್ಲು ನೀಡಿ ಮೊಬೈಲ್ ಅನ್ನು ಆನ್ಲಾಕ್ ಮಾಡಿಸುತ್ತಾರೆ.
ನಂತರ ಮಿರಾಕಲ್ ಬಾಕ್ಸ್ ಹಾಗೂ ಇತರೆ ತಂತ್ರಜ್ಞಾನದಿಂದ ಮೊಬೈಲ್ ಫೋನ್ ಗಳ ಐಎಂಇಐ ನಂಬರ್ ಗಳನ್ನು ಬದಲಿಸಿ ಬೇರೊಬ್ಬರಿಗೆ ಮಾರಾಟ ಮಾಡುತ್ತಾರೆ. ಹೀಗೆ ನಕಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ವೇಳೆಯಲ್ಲೇ ಉದಯಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.