ಮೈಸೂರು: ಜಿಲ್ಲಾಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರೂ ಆದ ಡಾ. ಹೆಚ್.ಸಿ. ಮಹದೆವಪ್ಪ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಲವಾರು ವಿಷಯಗಳ ಕುರಿತು ಮಹತ್ವದ ಸಭೆ ನಡೆಸಿದರು.
ಆಗಸ್ಟ್ 15 ರಂದು 70ನೇ ಸ್ವಾತಂತ್ಯ್ರ ದಿನಾಚರಣೆ ಹಾಗೂ ಅದರ ಸಿದ್ಧತೆಗಳ ಮತ್ತು ಭದ್ರತೆ ಬಗ್ಗೆ ಜಿಲ್ಲಾಧಿಕಾರಿ ಶಿಖಾ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಲೋಪದೋಷಗಳಿದ್ದಲ್ಲಿ ಸರಿಪಡಿಸಿಕೊಂಡು ಯಾವುದೇ ಧಕ್ಕೆ ಉಂಟಾಗದಂತೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು.
ನಂತರ ದಸರಾ ಮಹೋತ್ಸವಕ್ಕೆ ಅರಣ್ಯಗಳಿಂದ ಗಜಪಡೆಯನ್ನು ಕರೆತರುವ ಬಗ್ಗೆ, ಹುಣಸೂರು ತಾಲ್ಲೂಕಿನ ನಾಗರ ಹೊಳೆ ಅರಣ್ಯದಂಚಿನಿಂದ ಗಜಪಯಣ ಆರಂಭಿಸುವ ದಿನಾಂಕ ನಿಗದಿಗೊಳಿಸಿ, ಈ ತಿಂಗಳ 18 ರಂದು ಗಜಪಯಣಕ್ಕೆ ಕಾರ್ಯಕ್ರಮ ರೂಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಆನೆಗಳ ಆರೋಗ್ಯ ಕಾಪಾಡುವ ಅಧಿಕಾರಿಗಳಿಗೆ ಸೂಚನೆಯಿತ್ತರು.
ಸಚಿವರು ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿ ಹಾಗೂ ರಸ್ತೆಗಳ ದುರಸ್ಥಿಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಆದಷ್ಟು ಬೇಗ ಮುಗಿಸಬೇಕು, ಗುಣಮಟ್ಟದ ಕಾಮಗಾರಿಯಾಗಬೇಕು ಎಂದು ಆದೇಶಿಸಿದರು.
ಸಭೆಯಲ್ಲಿ ಶಾಸಕರುಗಳು, ಜಿಲ್ಲಾಧಿಕಾರಿ ಸಿ.ಶಿಖಾ, ಎಸ್.ಪಿ. ಅಭಿನವಕರೆ, ಪೊಲೀಸ್ ಆಯುಕ್ತ ಬಿ.ದಯಾನಂದ್, ಅರಣ್ಯ ಇಲಾಖೆ ಅಧಿಕಾರಿ ಕರಿಕಾಳನ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.