ಮೈಸೂರು: ವರಮಹಾಲಕ್ಷ್ಮಿ ಹಬ್ಬ ದಿನವೇ ಐದು ಚಿನ್ನ ತಯಾರಿಕಾ ಅಂಗಡಿಗೆ ಮಧ್ಯರಾತ್ರಿ ಕನ್ನ ಹಾಕಲು ಕಬ್ಬಿಣದ ರಾಡ್ ಹಿಡಿದು ಬಂದ ಖದೀಮರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗರಡಿಗೇರಿಯಲ್ಲಿ ನಡೆದಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲರೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಸಡಗರದಲ್ಲಿದ್ದಾಗ ಕಳ್ಳರ ಗ್ಯಾಂಗ್ ವೊಂದು ಅದೇ ದಿನ ರಾತ್ರಿ ಐದು ಕಡೆ ಚಿನ್ನಾಭರಣ ತಯಾರು ಮಾಡುವ ಅಂಗಡಿ, ಜುವೆಲ್ಲರಿ ಅಂಗಡಿಗಳಲ್ಲಿ ಕಳ್ಳತನ ಮಾಡಿದೆ. ಸುಮಾರು 120 ಗ್ರಾಂನಷ್ಟು ಚಿನ್ನ ಕದ್ದಿರುವ ಕಳ್ಳರು ಕೈಚಳಕ ಪ್ರದರ್ಶಿಸಿದ್ದಾರೆ.
ನಗರದ ಅಶೋಕ ರಸ್ತೆ ಹಿಂಭಾಗದ ವಿಮಲ್ ಗೋಲ್ಡ್ ಸ್ಮಿತ್ ಸೇರಿ ಅಕ್ಕಪಕ್ಕದಲ್ಲಿರುವ ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಚಿನ್ನಾಭರಣ ತಯಾರಿಸುವ ಅಂಗಡಿಯಲ್ಲಿ ಚಿನ್ನ-ಬೆಳ್ಳಿ ಪುಡಿಯ ವೇಸ್ಟೇಜ್ ಸಂಗ್ರಹ ಮಾಡಿಟ್ಟಿದ್ದು, ಕಳ್ಳರು ಅದನ್ನು ಬಿಡದೆ ಹೊತ್ತೊಯ್ದಿದ್ದಾರೆ. ಕಳ್ಳನೊಬ್ಬ ಶೆಲ್ಟರ್ ಮೀಟಲು ಬಳಸುವ ಕಬ್ಬಿಣದ ಸಲಾಕೆ ಹಿಡಿದು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಅಂಗಡಿ ಮಾಲೀಕರು ಈ ಸಂಬಂಧ ಲಷ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಲಷ್ಕರ್ ಪೊಲೀಸ್ ಠಾಣೆಯಲ್ಲಿ ಸಭೆ:
ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿನಿಂದ 10 ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳು ಕಳವಾಗಿದ್ದು, ಈ ಹಿನ್ನಲ್ಲೆಯಲ್ಲಿ ಲಷ್ಕರ್ ಠಾಣೆಯ ಇನ್ಸ್ ಪೆಕ್ಟರ್ ಕಾಂತರಾಜು ಚಿನ್ನ ಬೆಳ್ಳಿ ವರ್ತಕರ ಸಭೆ ಕರೆದು ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 2000 ಅಂಗಡಿಗಳು ಹಾಗೂ ಬಾರ್ ಗಳು ಬರುತ್ತವೆ. ನಮ್ಮಲ್ಲಿ ಪೊಲೀಸ್ ಪೇದೆಗಳ ಕೊರತೆಯಿದ್ದು ಅಂಗಡಿ ಮಾಲೀಕರು ಸಾಧ್ಯವಾದಷ್ಟು ಸಿಸಿಟಿವಿಯನ್ನು ಅಳವಡಿಸಿ ರಾತ್ರಿ ಸಮಯದಲ್ಲಿ ನಿಮ್ಮ ಅಂಗಡಿಯ ಕಡೆ ಒಂದು ಬಾರಿ ಮಧ್ಯರಾತ್ರಿ ಗಸ್ತು ತಿರುಗಿ ಎಂದು ಹೇಳಿ ಅಪಹಾಸ್ಯಕೀಡಾಗಿದ್ದಾರೆ.
ಈ ಬಗ್ಗೆ ಚಿನ್ನ ಬೆಳ್ಳಿ ವರ್ತಕರು ಶೀಘ್ರವೇ ನಗರ ಪೊಲೀಸ್ ಆಯುಕ್ತರನ್ನ ಭೇಟಿ ನೀಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.