ಮೈಸೂರು: ಪ್ರತಿಪಕ್ಷಗಳು ಕರೆ ನೀಡಿರುವ ಅಕ್ರೋಶ ದಿನ್ ಭಾರತ್ ಬಂದ್ ಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಆದರೆ ರಾಜ್ಯ ಸರ್ಕಾರದ ಬೆಂಬಲವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಮೈಸೂರಿನಲ್ಲಿ ದ್ವಂದ್ವ ಹೇಳಿಕೆ ನೀಡಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರೈಲಿನಲ್ಲಿ ಬಂದಿಳಿದ ಗೃಹ ಸಚಿವ ಜಿ.ಪರಮೇಶ್ವರ ಮಾಧ್ಯಮದೊಂದಿಗೆ ಮಾತನಾಡಿ, ನೋಟ್ ಬ್ಯಾನ್ ವಿಚಾರದಲ್ಲಿ ಜನಸಮಾನ್ಯರಿಗೆ ಉಂಟಾಗಿರುವ ಸಮಸ್ಯೆಯ ವಿರುದ್ದ ಪ್ರತಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕಾಂಗ್ರೆಸ್ ಪಕ್ಷವೂ ಬೆಂಬಲ ನೀಡಿದ್ದು ಆದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಕ್ರೋಶ ದಿನಕ್ಕೆ ಬೆಂಬಲ ನೀಡುತ್ತದೆ. ಆದರೆ ರಾಜ್ಯ ಸರ್ಕಾರ ಈ ಬಂದ್ ಗೆ ಬೆಂಬಲ ನೀಡುವುದಿಲ್ಲ. ಬಂದ್ ದಿನ ಏನಾದರೂ ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಪ್ರತಿಭಟನೆಯನ್ನ ಶಾಂತಿಯುತವಾಗಿ ನಡೆಸುವಂತೆ ಮನವಿ ಮಾಡಿದರು.
ಅಲ್ಲದೆ ದೇಶದಲ್ಲಿ ಪ್ರಧಾನಿಯವರು ಯಾವುದೇ ಪೂರ್ವ ಸಿದ್ದತೆಯಿಲ್ಲದೆ ನೋಟ್ ಬ್ಯಾನ್ ಮಾಡಿದ್ದು ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದ್ದು ಬ್ಲಾಕ್ ಮನಿಯನ್ನ ವೈಟ್ ಮಾಡುವ ದಂಧೆಯ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಬಹುದು ಎಂದು ಹೇಳಿದರು. ಡಿ.ಕೆ ರವಿ ಸಾವಿನ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿ ಸಾಕ್ಷಿಯನ್ನು ನಾಶ ಮಾಡಿಲ್ಲ ಎಂದ ಪರಮೇಶ್ವರ ಪೊಲೀಸರಿಗೆ ಭತ್ಯೆ ಪ್ರಮಾಣವನ್ನ ಹೆಚ್ಚಿಸಲಾಗಿದ್ದು ಮುಂದೆ ಪೊಲೀಸರ ವೇತನವನ್ನು ಸಹ ಹೆಚ್ಚಿಸುವ ಬಗ್ಗೆ ಸಮಿತಿಯನ್ನು ರಚಿಸಿದ್ದು ಅದರ ವರದಿ ಬಂದ ನಂತರ ವೇತನವನ್ನ ಹೆಚ್ಚಿಸಲಾಗುವುದು ಎಂದು ಹೇಳಿದರು.
ಶನಿವಾರ ಹೆಚ್ಚುವರಿ ಅಧಿವೇಶನ:
ಸುವರ್ಣ ಸೌಧದಲ್ಲಿ ಭದ್ರತೆಗಾಗಿ ಮೂರು ಸಾವಿರ ಪೊಲೀಸರನ್ನ ಬಳಸಿಕೊಳ್ಳಲಾಗಿತ್ತು. ಸೋಮವಾರ ಭಾರತ್ ಬಂದ್ ಹಿನ್ನಲ್ಲೆಯಲ್ಲಿ ಭದ್ರತೆಗಾಗಿ ಪೊಲೀಸರನ್ನ ಆಯಾ ಜಿಲ್ಲೆಗೆ ವಾಪಸ್ಸ್ ಕಳುಹಿಸಲಾಗಿದ್ದು ಇದರಿಂದ ಸೋಮವಾರದ ವಿಧಾನಸಭಾ ಅಧಿವೇಶನವನ್ನು ರದ್ದುಗೊಳಿಸಲಾಗಿದ್ದು, ಇದಕ್ಕೆ ಬದಲಾಗಿ ಮುಂದಿನ ಶನಿವಾರ ಹೆಚ್ಚುವರಿ ಅಧಿವೇಶನ ನಡೆಸಲಾಗುವುದೆಂದು ಪರಮೇಶ್ವರ ಇದೇ ಸಂಧರ್ಭದಲ್ಲಿ ತಿಳಿಸಿದರು.