ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿಯಮವನ್ನು ಮೀರಿ ಶಾಸಕರೇ ಜನರನ್ನು ಗುಂಪಿನೊಂದಿಗೆ ಅರಣ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿ ನಿಷೇಧಿತ ಪ್ರದೇಶಕ್ಕೆ ನುಗ್ಗಿರುವ ಘಟನೆ ಯಡಿಯಾಳ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಯಡಿಯಾಳ ವನ್ಯಜೀವಿ ವಲಯ ವ್ಯಾಪ್ತಿಯ ಬೇಲದ ಗುಪ್ಪೆಯ ಶ್ರೀಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವವೂ ನವೆಂಬರ್ 27 ರಿಂದ 30 ವರೆಗೆ ನಡೆಯುವ ಈ ಜಾತ್ರೆ ಈಚೆಗೆ ವಾಣಿಜ್ಯ ಉದ್ದೇಶಕ್ಕೂ ಹೆಚ್ಚು ಪ್ರಚಲಿತವಾಗಿತ್ತು. ಕಾಡಿನಲ್ಲಿ ವಾಹನ ದಟ್ಟಣೆ, ಹಾಗೂ ಅಡುಗೆ ಮಾಡುವ ಪರಿಪಾಠಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಢಳಿತದ ಸೂಚನೆ ಮೇರೆಗೆ ಕಾಡಿನೊಳಗೆ ಯಾವುದೇ ಖಾಸಗಿ ವಾಹನಗಳು ಹೋಗದಂತೆ ನಿರ್ಬಂಧ ಹೇರಲಾಗಿತ್ತು.
ಇದಕ್ಕೆ ಬದಲಾಗಿ ಅರಣ್ಯ ಇಲಾಖೆ ವಾಹನಗಳಲ್ಲಿ ಜನ ತೆರಳಿ ಪೂಜೆ ಸಲ್ಲಿಸುವಂತೆ ಕೂಡ ಸೂಚಿಸಲಾಗಿತ್ತು. ಆದರೆ ಶಾಸಕರು 27 ನೇ ತಾರೀಖು ರಾತ್ರಿ ಜಾತ್ರೆಗೆ ತೆರಳಿದ ವೇಳೆ ಅಲ್ಲಿ ಅಳವಡಿಸಿದ್ದ ಬ್ಯಾರೀಕೇಡ್ಗಳನ್ನು ಕಿತ್ತೆಸೆದು ಸ್ಥಳಿಯರನ್ನು ಖಾಸಗಿ ವಾಹನದಲ್ಲೇ ಕಾಡಿಗೆ ಹೋಗುವಂತೆ ಮಾಡಿದ್ದು, ಇದು ಅರಣ್ಯ ನಿಯಮದ ಉಲ್ಲಂಘನೆಯಾಗಿದೆ. ಈ ಬಗ್ಗೆ ಬಂಡೀಪುರ ಅರಣ್ಯ ನಿರ್ದೇಶಕ ಕೀರಾಲಾಲ್ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಇಷ್ಟೆಲ್ಲಾ ಆದರೂ ಹೆಚ್.ಡಿ ಕೋಟೆ ಶಾಸಕ ಚಿಕ್ಕಮಾದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು ಮಹದೇಶ್ವರ ಜಾತ್ರೆ ತಲ ತಲಾಂತರದಿಂದ ನಡೆದುಕೊಂಡು ಬಂದಿದೆ. ಅರಣ್ಯ ಅಧಿಕಾರಿಗಳು ಏಕಾಎಕಿ ನಿರ್ಬಂಧ ಹೇರಿದರೆ ಅದನ್ನು ಪಾಲಿಸಲು ಸಾಧ್ಯವಿಲ್ಲ. ಜಾತ್ರೆಗೆ 4 ಸಾವಿರಕ್ಕೂ ಅಧಿಕ ವಾಹನಗಳು ಬಂದಿದ್ದು, ಅವುಗಳನ್ನು ಹೊರಗೆ ನಿಲ್ಲಿಸಲು ಸಾಧ್ಯವಿರಲಿಲ್ಲ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಅವರು ಎಂದಿನಂತೆ ಜಾತ್ರೆ ನಡೆಯುವಂತೆ ಅಧಿಕಾರಿಗಳ ಗಮನಕ್ಕೆ ತಂದ ನಂತರವೇ ಈ ರೀತಿ ಮಾಡಿದ್ದೇನೆ. ಮುಂದಿನ ಭಾರಿ ನೋಡಿಕೊಂಡರೆ ಆಯಿತು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ದೂರು ದಾಖಲಾಗಲಿಲ್ಲ:
ಸಾಮಾನ್ಯವಾಗಿ ಬಂಡೀಪುರದ ನ್ಯಾಷನಲ್ ಪಾರ್ಕ್ ನ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಯಾರೇ ಆದರೂ ಸಂಜೆ 5.30 ನಂತರ ಪ್ರವೇಶ ಮಾಡುವಂತಿಲ್ಲ ಆದರೆ ಶಾಸಕರೇ ತಮ್ಮ ನೂರಾರು ಬೆಂಬಲಿಗರೊಂದಿಗೆ ವಾಹನಗಳಲ್ಲಿ ಈ ಪ್ರದೇಶಕ್ಕೆ ನುಗ್ಗಿರುವುದು ಅರಣ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಶಾಸಕರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.