ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ನಿಯಮ ಮೀರಿ ಶಾಸಕರೊಂದಿಗೆ ಜನರ ಗುಂಪು ಪ್ರವೇಶದ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯೆಯರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಶಾಸಕರ ವಿರುದ್ದ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಯಡಿಯಾಳ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬೆಲದಗುಪ್ಪೆಯ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಖಾಸಗಿ ವಾಹನಗಳು ನಿಷೇಧಿತ ಪ್ರದೇಶಕ್ಕೆ ಪ್ರವೇಶವಿಲ್ಲ ಎಂಬ ಆದೇಶವನ್ನು ಉಲ್ಲಂಘಿಸಿ ಹೆಚ್.ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ನೇತೃತ್ವದಲ್ಲಿ ನೂರಾರು ಖಾಸಗಿ ವಾಹನಗಳೊಂದಿಗೆ ಅರಣ್ಯ ಪ್ರವೇಶಿಸಿ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಅರಣ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿ ನಿಷೇದಿತ ಅರಣ್ಯ ಪ್ರದೇಶವನ್ನು ನಿಷೇಧಿತ (ಸಂಜೆ) ಸಮಯದಲ್ಲಿ ಪ್ರದೇಶಿಸಿದ ಹಿನ್ನಲ್ಲೆಯಲ್ಲಿ ಬಂಡೀಪುರ ಅರಣ್ಯ ನಿರ್ದೇಶಕ ಕಿರಾಲಾಲ್ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯೆರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು ಶಾಸಕರ ವಿರುದ್ದ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದ್ದು, ವರದಿಯ ಅನ್ವಯ ಶಾಸಕರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದು ಕಿರಾಲಾಲ್ ಸ್ಪಷ್ಟ ಪಡಿಸಿದ್ದಾರೆ.
ಹುಂಡಿ ತೆಗಯದಂತೆ ನಿರ್ಬಂಧ:
ಕಾರ್ತಿಕ ಮಾಸದ ಕೊನೆಯ ಸೋಮವಾರ ಸೇರಿದಂತೆ ಮೂರು ದಿನಗಳ ಕಾಲ ವರ್ಷದಲ್ಲಿ ಒಂದು ಬಾರಿ ಮಾತ್ರ ಪೂಜಿಸಿಲ್ಪಡುವ ಸಂರಕ್ಷಿತ ಅರಣ್ಯ ಪ್ರದೇಶ ಬೆಲದಗುಪ್ಪೆಯ ಶ್ರೀಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಯಡಿಯಾಳ ಸುತ್ತಮುತ್ತಲ ಕಾಡಂಚಿನ ಗ್ರಾಮದ ಜನರು ಆಗಮಿಸಿ ಹರಕೆ ಸಲ್ಲಿಸಿ ಜಾತ್ರೆಯಲ್ಲಿ ಪಾಲ್ಗೊಳುತ್ತಾರೆ. ಅದೇ ರೀತಿ ಇದೇ ತಿಂಗಳ 27 ರಿಂದ 30 ತಾರೀಖಿನವರೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಕೊನೆಯ ದಿನವಾದ ಇಂದು ದೇವಸ್ಥಾನದ ಹುಂಡಿ ಹೊಡೆದು ಹುಂಡಿ ಹಣವನ್ನು ಬ್ಯಾಂಕ್ ನಲ್ಲಿ ಸಂದಾಯ ಮಾಡುವುದು ವಾಡಿಕೆ. ಆದರೆ ಈ ಬಾರಿ ಅರಣ್ಯ ಇಲಾಖೆಯ ನಿಯಮವನ್ನ ಉಲ್ಲಂಘನೆ ಮಾಡಿರುವುದರಿಂದ ಅರಣ್ಯಾಧಿಕಾರಿಗಳು ದೇವಸ್ಥಾನದ ಹುಂಡಿಯನ್ನ ತೆಗೆಯದಂತೆ ನಿರ್ಬಂದ ಹೇರಿದ್ದಾರೆ.