ಕಾಸರಗೋಡು: ಕೇರಳದಲ್ಲಿ ಬಿಜೆಪಿಯನ್ನು ಮುಗಿಸಲು ಹೊರಟಿರುವ ಸಿಪಿಎಂ ಮೂರ್ಖರ ಜಗತ್ತಿನಲ್ಲಿದೆ. ಹಿಂಸಾತ್ಮಕ ರಾಜಕೀಯದಿಂದ ಸಿಪಿಎಂ ಹಿಂದೆ ಸರಿಯಬೇಕು ಎಂದು ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಕುಂಬಳೆಯಲ್ಲಿ ಕೆ.ಟಿ ಜಯಕೃಷ್ಣ ಮಾಸ್ಟರ್ ಸಂಸ್ಮರಣಾ ದಿನಾಚರಣೆಯಂಗವಾಗಿ ನಡೆದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಹಿಂಸಾತ್ಮಕ ರಾಜಕೀಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರಕಾರ ಕೇರಳದ ಕೊನೆ ಸರಕಾರವಾಗಲಿದೆ. ಪೊಲೀಸರನ್ನು ಪಕ್ಷದ ಕಾರ್ಯಕರ್ತರನ್ನಾಗಿ ಬಳಸುತ್ತಿದೆ. ಜನರ ಸರಕಾರ ಎಂಬುದನ್ನು ಮರೆತಿದ್ದು, ಜನತೆಯಿಂದ ತಕ್ಕ ಶಿಕ್ಷೆ ಪಿಣರಾಯಿ ಸರಕಾರಕ್ಕೆ ಕಾದಿದೆ ಎಂದು ಅವರು ಹೇಳಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಪಿ.ಆರ್ ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ , ಸತ್ಯಜಿತ್ ಸುರತ್ಕಲ್ , ಎಂ . ಸಂಜೀವ ಶೆಟ್ಟಿ , ಪ್ರಮೀಳಾ ಸಿ . ನಾಯ್ಕ್ , ಎ . ಪಿ ಹರೀಶ್ ಕುಮಾರ್ , ಸುರೇಶ್ ಕುಮಾರ್ ಶೆಟ್ಟಿ , ರವೀಶ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. ಸಮಾವೇಶದ ಮೊದಲು ಕುಂಬಳೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು.