ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ವಿಜಯನಗರದ ನಿವಾಸದ ಎದುರು ಬೆಳಿಗ್ಗೆ 11ಗಂಟೆಯಿಂದ ರಾಜ್ಯ ರೈತ ಸಂಘದ ಮುಖಂಡರು ನಾಲೆಗೆ ನೀರು ಬಿಡಿ ಇಲ್ಲ, ರೈತರಿಗೆ ವಿಷಕೊಡಿ ಚಳುವಳಿಯನ್ನು ಹಮ್ಮಿಕೊಂಡಿದ್ದು, ರೈತರು ಪ್ರತಿಭಟನೆ ನಡೆಸದಂತೆ ಪೊಲೀಸರು ತಡೆದ ಪರಿಣಾಮ ಮಾತಿನ ಚಕಮಕಿ ಉಂಟಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ರೈತರು ನೀರಿಲ್ಲದೇ ಗೋಳಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಗುಲಾಮಗಿರಿಯ ವರ್ತನೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಬಿನಿ ಅಚ್ಚುಕಟ್ಟುಭಾಗದ ಒಂದು ಲಕ್ಷ ಎಕರೆ ಭತ್ತ ಕಟಾವಿಗೆ ಬರುತ್ತಿದ್ದು ಒಂದು ವಾರಗಳ ಕಾಲ ನೀರಿನ ಅವಶ್ಯಕತೆ ಇದೆ. ಅದಕ್ಕೆ ಒಂದು ಟಿ.ಎಂ.ಸಿ.ನೀರು ಬೇಕು. ಅಧಿಕಾರಿಗಳು ರೈತರ ಕಷ್ಟ ಅರಿಯದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಲೂ ನದಿ ಮೂಲಕ ನಿತ್ಯ 1500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ನಿಲ್ಲಿಸಿ ಅಚ್ಚುಕಟ್ಟು ನಾಲೆಗಳಿಗೆ ಹರಿಸಿ ಎಂದು ಒತ್ತಾಯಿಸಿದರು. ಕಬಿನಿ ಜಲಾಶಯದಲ್ಲಿ 3.5ಟಿಎಂಸಿ ನೀರು ಇದ್ದು ಕುಡಿಯುವ ನೀರಿಗಾಗಿ ಬೇಕಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ಹಿಂದಿನ ವರ್ಷದಲ್ಲಿ 55ಅಡಿ ನೀರು ಇರುವ ತನಕ ಹರಿಸಲಾಗಿದೆ. ಆದರೆ ಇಂದಿನ ವರ್ಷ 64 ಅಡಿ ನೀರು ಸಂಗ್ರಹವಾದರೂ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಅಚ್ಚುಕಟ್ಟು ಭಾಗದಲ್ಲಿ ಬೆಳೆದು ನಿಂತಿರುವ ಭತ್ತ 20ಲಕ್ಷ ಕ್ವಿಂಟಾಲ್ ಉತ್ಪಾದನೆ ನಿರೀಕ್ಷೆ ಇದೆ. ಸುಮಾರು 400 ಕೋಟಿ ಹಣ ಹೂಡಿಕೆಯಾಗಿದೆ. ಈ ಭತ್ತದ ಫಸಲು ಸಂರಕ್ಷಣೆ ಮಾಡಿದರೆ 50ಕೋಟಿಗೂ ಹೆಚ್ಚು ಮೇವು ದನಕರುಗಳಿಗೆ ಸಿಗುತ್ತದೆ. ಬರಗಾಲದ ಅಪಾಯದಿಂದ ಸ್ವಲ್ಪಮಟ್ಟಿಗೆ ಪಾರು ಮಾಡಬಹುದಾಗಿದೆ. ತಕ್ಷಣವೇ ನಾಲೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ರೈತರಿಗೆ ಕಟಾವು ಸಾಗಾಣಿಕೆ ವೆಚ್ಚ ಕಳೆದು ಟನ್ ಗೆ 1700ರೂ. ನೀಡುತ್ತಾರೆ. ಸಕ್ಕರೆ ಬೆಲೆ ಏರಿಕೆಯಾಗಿದ್ದರೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಬೇರೆ ಜಿಲ್ಲೆಯ ರೈತರಿಗೆ ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಲಾಗಿದೆ. ಆದರೆ ಸ್ಥಳೀಯ ಮೈಸೂರು-ಚಾಮರಾಜನಗರ ಜಿಲ್ಲೆ ರೈತರನ್ನು ನಿರ್ಲಕ್ಷ್ಯಿಸಿ ಕಾರ್ಖಾನೆಯವರ ಹಿತರಕ್ಷಣೆಗೆ ನಿಂತಿದ್ದಾರೆ ಎಂದು ದೂರಿದರು. ನಮ್ಮ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲೂಕು ಅಧ್ಯಕ್ಷ ವರಕೂಡು ಕೃಷ್ಣೇಗೌಡ ಮುಖಂಡರಾದ ಬರಡನಪುರ ಎ.ನಾಗರಾಜು, ಅಂಬಳೆ ಮಂಜುನಾಥ್, ಹಾಡ್ಯ ರವಿ, ರವಿ, ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.