ಮೈಸೂರು: ಶಿಕ್ಷಣದ ಮೂಲಭೂತ ಧ್ಯೇಯ ಮಕ್ಕಳನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದರು.
ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ತರಗತಿಯನ್ನು ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಉದ್ಘಾಟಿಸಿದರು. ಬಳಿಕ ಶಾಲಾ ಮಕ್ಕಳಿಗೆ ಭಾರತೀಯ ಪೊಲೀಸ್ ಸೇವಗಳ ಕುರಿತು ಬೋಧಿಸಿದರು. ಶಿಕ್ಷಣದ ಮೂಲ ಉದ್ದೇಶವೇ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದಾಗಿದೆ. ಶಿಕ್ಷಣದಲ್ಲಿ ಪಡೆದ ಪ್ರತಿಯೊಂದು ಪದವಿಯೂ ಕಷ್ಟಗಳನ್ನು ಪಾರು ಮಾಡುವಂತಿರಬೇಕು ಎಂದರು.
ಜೀವನದಲ್ಲಿನ ಕಷ್ಟಗಳನ್ನು ತೊಡೆದುಹಾಕುವುದೇ ನಿಜವಾದ ಶಿಕ್ಷಣ. ಆಭರಣದಿಂದ ಶ್ರೀಮಂತಿಕೆ ಪ್ರದರ್ಶಿಸುವುದಲ್ಲ. ನಮ್ಮ ಶ್ರೀಮಂತಿಕೆ ನಡೆ, ನುಡಿಯಲ್ಲಿ ಕಂಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳೊಂದಿಗೆ ರವಿ.ಡಿ.ಚನ್ನಣ್ಣನವರ್ ಶಿಕ್ಷಕರಾಗಿ ಬೆರೆತರು. ಕಾರ್ಯಕ್ರಮಕ್ಕೂ ಮುನ್ನ ಶಾಲೆಗೆ ಆಗಮಿಸಿದ ಪೊಲೀಸ್ ಆಧಿಕಾರಿಯನ್ನು ಅಲ್ಲಿನ ವಿದ್ಯಾರ್ಥಿಗಳು ಹೂಗುಚ್ಛ ನೀಡುವ ಮೂಲಕ ಭವ್ಯ ಸ್ವಾಗತ ನೀಡಿದರು.