ಮೈಸೂರು: ಬಂಗಾಳಕೊಲ್ಲಿಯ ಸಮುದ್ರದಲ್ಲಿ ಎದ್ದಿರುವ ವರ್ಧಾ ಚಂಡಾ ಮಾರುತದಿಂದಾಗಿ ಕಳೆದ ರಾತ್ರಿಯಿಂದಲೂ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ತಣ್ಣನೆಯ ವಾತಾವರಣ, ಮೋಡದಿಂದ ಆವರಿಸಿದ್ದು ಸೋನೆ ಮಳೆ ಬೀಳುತ್ತಿದೆ. ಇದರಿಂದಾಗಿ ವ್ಯಾಪಾರಸ್ತರಿಗೆ ಹೊರ ಊರುಗಳಿಗೆ ತೆರಳುವವರು ಮನೆಯಿಂದ ಹೊರಗೆ ಬರಲು ಪರದಾಡಬೇಕಾಯಿತು, ಮೂಲೆ ಮುಸುಕು ಸೇರಿದ್ದ ಜರ್ಕಿನ್, ಶಾಲು, ಬನಿಯನ್, ಸ್ಪೆಟರ್ಗಳು, ಛತ್ರಿಗಳು ಇಂದ ಹೊರಗೆಬಂದವು, ಇಂದು ಈದ್ ಮಿಲಾದ್ ಹಬ್ಬವಾದ್ದರಿಂದ ಶಾಲಾ ಕಾಲೇಜು ಹಾಗು ಕಚೇರಿಗಳಿಗೆ ಸರ್ಕಾರಿ ರಜೆ ಇರುವ ಕಾರಣ ಮಳೆಯ ಬಿಸಿ ಸಾಕಷ್ಟು ಜನರಿಗೆ ತಟ್ಟಲಿಲ್ಲ, ಆದರೂ ಮನೆಯಿಂದ ಹೊರ ಬರಲು ಇರಿಸಿಮುರಿಸು ಎನ್ನುವಂತಿತ್ತು. ಎಲ್ಲರೂ ಮನೆಯೊಳಗೆ ಬೆಚ್ಚನೆಯವಾಗಿ ಇರಬೇಕಾಯಿತು.
ಇದ್ದಕ್ಕಿದ್ದಂತೆ ಆರಂಭವಾದ ಈ ಮಳೆಯಿಂದಾಗಿ ಹಳ್ಳಿಗಾಡಿನ ರೈತರಿಗೆ ಸ್ಪಲ್ಪಮಟ್ಟಿಗೆ ತೊಂದರೆಯಾಗಿದೆ, ತಾವು ಬೆಳೆದ ಪಸಲು ಕೊಯ್ಲಿಗೆ ಬಂದಿದ್ದು,ಅದನ್ನು ಕೊಯ್ದು ಒಕ್ಕಣಿಕೆ ಮಾಡಲಾಗದ ಸ್ಥಿತಿ ಎದುರಾಗಿದೆ, ರೈತರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ, ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎನ್ನುತ್ತಿದ್ದಾರೆ. ರೈತರಿಗೆ ಸಾಕಷ್ಟು ನಷ್ಟವಾಗಿದೆ.
ಮತ್ತೊಂದೆಡೆ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈ ಮಳೆ ಸಹಕಾರಿಯಾಗಿದೆ, ಮಳೆಯಿಂದಾಗಿ ಭೂಮಿ ನೀರು ಕುಡಿಯುವುದಲ್ಲದೆ ಅಲ್ಪ ಸ್ವಲ್ಪ ನೀರು ಹರಿದುಬಂದು ಕೆರೆ ಕಟ್ಟೆಗಳು, ಅಣೆಗಳು ತುಂಬಿ ತಗ್ಗಿರುವ ನೀರಿನ ಮಟ್ಟವನ್ನು ಹೆಚ್ಚಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ, ಜನ ಜಾನುವಾರುಗಳಿಗೆ, ಕುಡಿಯವ ನೀರಿಗೆ ತೊಂದರೆ ಇರುವುದಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಇದೇ ರೀತಿ ಇನ್ನೂ ಎರಡು ದಿನ ಮಳೆ ಸುರಿದರೆ ಅಣೆಕಟ್ಟುಗಳ ನೀರಿನಮಟ್ಟ ಹೆಚ್ಚುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.