ಮೈಸೂರು: ಮೈಸೂರು ಜಿಲ್ಲೆಯ ಯೋಧರೊಬ್ಬರು ಗುಜರಾತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ನಿವಾಸಿಯಾಗಿರುವ ಪಳನಿಸ್ವಾಮಿ ಎಂಬುವರ ಪುತ್ರನಾಗಿರುವ ಸುಬ್ರಹ್ಮಣ್ಯನ್(33) ಮೃತ ವ್ಯಕ್ತಿ. ಕಳೆದ ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯನ್ ಅವರು ಐದು ವರ್ಷದ ಹಿಂದೆ ಮದುವೆಯಾಗಿದ್ದು, ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.
ಅವರು ಮುಂದಿನ ಎರಡು ದಿನಗಳಲ್ಲಿ ರಜೆ ಮೇಲೆ ದೇವಗಳ್ಳಿ ಗ್ರಾಮಕ್ಕೆ ಆಗಮಿಸುವವರಿದ್ದರು. ಮಂಗಳವಾರದಂದು ಮನೆಗೆ ಕರೆ ಮಾಡಿ ಮಗುವಿನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಅಂದೇ ಅವಘಡದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಯೋಧನ ಸಾವಿನ ಸುದ್ದಿ ಕೇಳಿ ಕುಟುಂಬದ ಸದಸ್ಯರು ತೀವ್ರ ದುಃಖತಪ್ತರಾಗಿದ್ದಾರೆ