ಮೈಸೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ವಿಭಾಗೀಯ ಕಚೇರಿ ಮೈಸೂರು ವತಿಯಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಇಂಧನದ ಉಳಿತಾಯ ಹಾಗೂ ನವೀಕರಿಸಬಹುದಾದ ಇಂಧನದ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಬುಧವಾರ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಡಿ.ರಂದೀಪ್ ಅರಮನೆ ಕೋಟೆ ಅಂಜುನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ನಾವು ಚಿಕ್ಕವರಿದ್ದಾಗ ಇಂಧನಗಳ ಬಗ್ಗೆ ಅರಿವಿರಲಿಲ್ಲ. ಆಗ ಇಷ್ಟು ಪ್ರಮಾಣದಲ್ಲಿ ದೊರೆಯುತ್ತಿರಲಿಲ್ಲ. ಇಂಧನಗಳನ್ನು ಮಿತವಾಗಿ ಬಳಸಬೇಕು. ಮಿತವಾಗಿ ಬಳಸುವುದರಿಂದ ಮುಂದಿನ ಪೀಳಿಗೆಗೂ ಉಳಿಸಬಹುದು. ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಸ್ನೇಹಿತರಿಗೆ ಇಂಧನದ ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ದೇಶದ ಅಭಿವೃದ್ಧಿ ಇಂದಿನ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಸ್ವತಹ ಜಿಲ್ಲಾಧಿಕಾರಿಗಳು ಘೋಷಿತ ಫಲಕವನ್ನು ಹಿಡಿದುಕೊಂಡು ವಿದ್ಯಾರ್ಥಿಗಳ ಜೊತೆ ಜಾಥಾದಲ್ಲಿ ಪಾಲ್ಗೊಂಡರು. ಈ ಜಾಥಾದಲ್ಲಿ ಸುಮರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಮೈಸೂರಿನ ಒಟ್ಟು 12 ರೋಟರಿ ಸಂಸ್ಥೆಯ ಸದಸ್ಯರು ಹಾಗೂ ಪಾದಾಧಿಕಾರಿಗಳು ಭಾಗವಹಿಸಿದ್ದರು. ಜಾಥಾ ಅರಮನೆ ಬಲರಾಮ ದ್ವಾರದಿಂದ ಹೊರಟು ದೊಡ್ಡಗಡಿಯಾದ ವೃತ್ತದಿಂದ ಅಶೋಕ ರಸ್ತೆ ಮೂಲಕ ಪ್ರಮುಖ ರಸ್ತೆಗಳನ್ನು ಸಾಗಿ ಅರಮನೆಗೆ ಬಂದು ತಲುಪಿತು.
ಹಸಿರು ಶಕ್ತಿ ಬಳಸಿ, ಹಣವ ದಿನವು ಉಳಿಸಿ, ಸೌರ ಶಕ್ತಿ ಬಳಕೆ, ಬಾಳಿನಲ್ಲಿ ಉಳಿಸಿ, ಇಂಧನ ಉಳಿತಾಯ ದೇಶದ ಆದಾಯ ಹೀಗೆ ಇನ್ನೂ ಅನೇಕ ಫಲಗಳನ್ನು ಹಿಡಿದು ಘೋಷಣೆ ಕೂಗುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಮೈಸೂರು ಯೋಜನಾ ಎಂಜಿನಿಯರ್ ದಿನೇಶ್ ಕುಮಾರ್ ಡಿ.ಕೆ, ರೋಟರಿ ವಲಯ ಅಧ್ಯಕ್ಷ ಹನುಮಂತರಾಯ ಇನ್ನೀತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.