ಮೈಸೂರು: ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಆಡಳಿತ ಕುಲಸಚಿವ ಪ್ರೊ.ಪಿಎಸ್ ನಾಯಕ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಹಣಕಾಸು ಅವ್ಯವಹಾರ, ನೇಮಕಾತಿಯಲ್ಲಿ ಅವ್ಯವಹಾರ, ಕಂಪ್ಯೂಟರ್ ಖರೀದಿ ಅವ್ಯವಹಾರ, ಅಂಕಪಟ್ಟಿ ಖರೀದಿ ಅವ್ಯವಹಾರ ಸೇರಿದಂತೆ ಹಲವಾರು ಅವ್ಯವಹಾರಗಳಲ್ಲಿ ಕೆಎಸ್.ಒಯು ಆಡಳಿತ ಕುಲಸಚಿವ ಪ್ರೊ.ಪಿ.ಎಸ್ ನಾಯಕ್ ಸೇರಿದಂತೆ ಇತರೆ 7 ಮಂದಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ನಿವೃತ್ತ ನ್ಯಾ.ಕೆ. ಭಕ್ತವತ್ಸಲಂ ಸಮಿತಿ ರಾಜ್ಯಪಾಲರಿಗೆ ವರದಿ ಸಲ್ಲಿಸಿತ್ತು.
ಈ ವರದಿ ಅನ್ವಯ 7 ಜನರ ವಿರುದ್ದ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದ್ದು ಇದರ ವಿರುದ್ದ ಹೈಕೋರ್ಟ್ ನಲ್ಲಿ ಜಾಮೀನು ಸಹ ಪಡೆದಿದ್ದರು. ಆದರೆ ಕೆಎಸ್ ಒಯುನ ಹಣಕಾಸು ಅವ್ಯವಹಾರದಲ್ಲಿ ಕುಲಸಚಿವ(ಆಡಳಿತ) ಪಿಎಸ್ ನಾಯಕ್ ಭಾಗಿಯಾಗಿರುವ ಹಿನ್ನಲ್ಲೆಯಲ್ಲಿ ಅವರನ್ನ ರಾಜ್ಯಪಾಲರು ನಿನ್ನೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಇಂದು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.