ಮೈಸೂರು: ದೆಹಲಿಯ ಸ್ಕೈಡೈವಿಂಗ್ ಸಂಸ್ಥೆಯ ವತಿಯಿಂದ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಹೂ ಡೈವ್ಸ್ ಲೈವ್ಸ್ ಎಂಬ ಘೋಷಣೆಯೊಂದಿಗೆ ಎರಡು ತಿಂಗಳುಗಳ ಕಾಲ ನಡೆಯಲಿರುವ ಸಾಹಸಮಯ ಕಾರ್ಯಕ್ರಮ ಸ್ಕೈಡೈವಿಂಗ್ ಗೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಸ್ಕೈಡೈವಿಂಗ್ ಗೆ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮೈಸೂರಲ್ಲಿ ಸ್ಕೈಡೈವಿಂಗ್ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಸ್ಕೈಡೈವಿಂಗ್ ಅಂತಾರಾಷ್ಟ್ರೀಯ ಕ್ರೀಡಾ ಚಟುವಟಿಕೆ ಆಗಿರುವುದರಿಂದ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳೆಯಬಹುದು ಎಂದು ಹೇಳಿದರು. ಪ್ರಥಮ ಬಾರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರಿನಲ್ಲಿ ರೋಮಾಂಚನಕಾರಿ ಸಾಹಸ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮೈಸೂರಿನಲ್ಲಿ ಜಂಪ್ ಮಾಡಲು ಸೂಕ್ತ ವಾತಾವರಣವಿದೆ ಎನ್ನುವ ದೃಷ್ಟಿಯಿಂದ ಆಯೋಜಿಸಲಾಗಿದೆ ಎಂದರು. ಈ ಹಿಂದೆ ರೈಟ್ ಟು ಹಂಪಿ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಉಡುಪಿಯಲ್ಲಿ ಸರ್ಫಿಂಗ್ ನಡೆಸಲಾಗಿತ್ತು. ಇದೀಗ ಇಲ್ಲಿ ಬಲೂನ್ ಹಾರಾಟವನ್ನೂ ನಡೆಸಬೇಕೆಂದುಕೊಂಡಿದ್ದೇವೆ. ಅನುಮತಿ ಸಿಕ್ಕರೆ ಬಲೂನ್ ಹಾರಾಟವನ್ನೂ ನಡೆಸಲಿದ್ದೇವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಮೈಸೂರು ಪ್ರವಾಸೋದ್ಯಮ ಕ್ಷೇತ್ರವಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ಸ್ಕೈಡೈವಿಂಗ್ ಆಯೋಜಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ತಿಳಿಸಿದರು. ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಿಂದ ಉತ್ತೇಜನಗೊಂಡು ಭಾಗವಹಿಸಿದರೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಇದರಲ್ಲಿ ಭದ್ರತೆ ಇದೆ. ಭಯಪಡಬೇಕಾಗಿಲ್ಲ. ಎಲ್ಲರೂ ಭಾಗವಹಿಸಬಹುದು. ಎರಡು ತಿಂಗಳುಗಳವರೆಗೆ ಅನುಮತಿ ನೀಡಲಾಗಿದ್ದು, ಎರಡು ತಿಂಗಳುಗಳ ಕಾಲ ನಡೆಯಲಿದೆ. ಒಬ್ಬರಿಗೆ 35ಸಾವಿರ ರೂಪಾಯಿ ತಗುಲುತ್ತದೆ ಎಂದು ತಿಳಿಸಿದರು.
ಮೊದಲು ಸ್ಕೈಡೈವಿಂಗ್ ನಡೆಸಿದ ಸಮಾಜಕಲ್ಯಾಣ ಇಲಾಖಾ ಕಾರ್ಯದರ್ಶಿ ಮಣಿವಣ್ಣನ್ ತಮ್ಮ ಅನುಭವವನ್ನು ಹಂಚಿಕೊಂಡರು. ಗಾಳಿ ಮತ್ತು ತಂಪಾದ ವಾತಾವರಣದಲ್ಲಿ ಹಾರಾಟ ನಡೆಸಿದ್ದು ರೋಮಾಂಚನವಾಯಿತು. ಒಂದು ಕ್ಷಣಕ್ಕೆ ಮಾತುಗಳು ಹೊರಬರುತ್ತಿಲ್ಲ. ಅಷ್ಟೊಂದು ಸಂತೋಷವಾಗಿದೆ. ಮೈಸೂರಿನಲ್ಲಿ ಸ್ಕೈಡೈವಿಂಗ್ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮೈಸೂರಿನ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಿ. ಇಂಥಹ ಕ್ರೀಡೆಗಳು ಕೇವಲ ವಿದೇಶಗಳಲ್ಲಿ ಮಾತ್ರ ನಡೆಯುತ್ತವೆ. ಆದರೆ ಈಗ ಮೈಸೂರಿಗೆ ಬಂದಿದೆ. ಇಲ್ಲಿನ ಜನತೆ ಇದರ ಸಂತಸವನ್ನು ಅನುಭವಿಸಿ ಎಂದು ತಿಳಿಸಿದರು.
ಈ ಸಂದರ್ಭ ತರಬೇತುದಾರ ಪಾಷಾ, ಏರ್ ಪೋರ್ಟ್ ಅಥಾರಿಟಿ ಉಸ್ತುವಾರಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸ್ಕೈಡೈವಿಂಗ್ ನಲ್ಲಿ ಪಾಲ್ಗೊಳ್ಳಲು ಸೂಕ್ತ ತರಬೇತಿ ನೀಡಲಾಗುತ್ತಿದ್ದು, ಪ್ರತಿಯೊಂದನ್ನೂ ಕಲಿಸಲಾಗುತ್ತದೆ. ವಿಮಾನದಿಂದ ಸುಮಾರು 15ಸಾವಿರ ಅಡಿ ಎತ್ತರದಿಂದ ಪ್ಯಾರಾಚೂಟ್ ಕಟ್ಟಿಕೊಂಡು ಭೂಮಿಗೆ ಜಿಗಿಯುವ ಸಾಹಸವನ್ನು ಮಾಡಲಾಗುತ್ತದೆ.ಸ್ಕೈಡೈವಿಂಗ್ ನಲ್ಲಿ ಪಾಲ್ಗೊಳ್ಳಲು ಜನಸಾಮಾನ್ಯರಿಗೂ ಅವಕಾಶವಿದ್ದು, 18ವರ್ಷ ದಾಟಿರಬೇಕು. ಅಂತರರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರವನ್ನು ಹೊಂದಿರುವ ಪರಿಣಿತರಿಂದ ತರಬೇತಿ ನೀಡಿದ ಬಳಿಕ ಸ್ಕೈಡೈವಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಅದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಸ್ಟ್ಯಾಟಿಕ್ ಲೈನ್ ಜಂಪ್ ಮತ್ತು ಟಂಡೆಮ್ ಜಂಪ್ ನಲ್ಲಿಯೂ ತರಬೇತಿಯನ್ನು ನೀಡಲಾಗುತ್ತದೆ. ಅಮೇರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಇಂಥಹ ಸಾಹಸ ಕ್ರೀಡೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತಿದ್ದು, ಮೈಸೂರಿಗರಿಗೂ ಈಗ ಸಾಹಸ ಕ್ರೀಡಯಾಡಲು ಸದಾವಕಾಶ ಒದಗಿ ಬಂದಿದೆ