ಪಿರಿಯಾಪಟ್ಟಣ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಬೆಳೆ ನಷ್ಟ ಹಾಗೂ ಸಾಲ ಬಾಧೆೆಯಿಂದ ರೈತನೊಬ್ಬ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದಿವಂಗತ ಗೋವಿಂದೇಗೌಡರ ಪುತ್ರ ಪ್ರಸನ್ನ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತ. ಈತ ತನಗಿದ್ದ 2.25 ಎಕರೆ ಜಮೀನಿನಲ್ಲಿ ತಂಬಾಕು, ಭತ್ತ, ಮತ್ತಿತರ ಬೆಳೆಗಳನ್ನು ಬೇಸಾಯ ಮಾಡಿದ್ದನು ಆದರೆ ಬರದ ಹಿನ್ನಲೆ ಹಾಗೂ ಬೆಳೆ ಹಾನಿಯಿಂದ ತೀವ್ರ ನಷ್ಟವಾಗಿತ್ತು.
ಕೃಷಿ ಚಟುವಟಿಕೆಗಾಗಿ ಕಣಗಾಲು ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಹಾರನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ 1.25 ಲಕ್ಷ ಹಾಗೂ ಕೈಸಾಲವಾಗಿ 3 ಲಕ್ಷ ರೂ.ಗಳನ್ನು ಪಡೆದಿದ್ದರು. ಸಾಲ ಹೆಚ್ಚಾದ ಪರಿಣಾಮ ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಮಾಡಿದ ಕೃಷಿಯೂ ನೆಲಕಚ್ಚಿದ್ದರಿಂದ ಸಾಲ ತೀರಿಸುವ ಹಾದಿ ಕಾಣದೆ ಚಿಂತಾಕ್ರಾಂತರಾಗಿದ್ದರು.
ಈ ನಡುವೆ ಸಾಲಗಾರರ ಕಾಟ ಜಾಸ್ತಿಯಾದ ಹಿನ್ನಲೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಜೋಳ ಹಾಳಾಗದಂತೆ ರಕ್ಷಿಸುವ ರಾಸಾಯನಿಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇದನ್ನು ಕಂಡ ಅವರ ಸಹೋದರ ಸ್ವಾಮಿ ಹಾಗೂ ತಾಯಿ ಚಿಕಿತ್ಸೆಗೆಂದು ಗ್ರಾಮದಿಂದ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ತರುವ ಮಾರ್ಗ ಮಧ್ಯೆ ಪುನಾಡಹಳ್ಳಿ ಗ್ರಾಮದಲ್ಲಿ ಅಸುನೀಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ನಂತರ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತಂದು ಶವ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಮೃತರ ಸಹೋದರ ಸ್ವಾಮಿ ಬೆಟ್ಟದಪುರ ಪೊಲೀಸರಿಗೆ ದೂರು ನೀಡಿದ್ದು, ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪಟ್ಟಣದ ಶವಾಗಾರಕ್ಕೆ ತಹಸೀಲ್ದಾರ್ ರಂಗರಾಜು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತರ ಸಂಬಂಧಿಕರಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡರು.