ಮೈಸೂರು: ಇಂಡೋ-ಜಪಾನ್ ಬೋನ್ಸಾಯ್ ಅಧ್ಯಯಯನ ತಂಡ ಹಾಗೂ ಮುಂಬೈ ಮತ್ತು ಅದರ ಸಂಬಂಧ ಅಧ್ಯಯನಗಳ ಸಹಯೋಗದಲ್ಲಿ ಅವಧೂತ ದತ್ತ ಪೀಠವು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೂರು ದಿನಗಳ ಕಾಲ ನಡೆಸಲಿರುವ ಅಂತಾರಾಷ್ಟ್ರೀಯ ಬೋನ್ಸಾಯ್ ಸಮಾವೇಶಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪವಿತ್ರ ಔದುಂಬರ ಬೋನ್ಸಾಯ್ ಮರಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಬಾಲ ಸ್ವಾಮೀಜಿ ಮಾತನಾಡಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಬಾಲ್ಯದಿಂದಲೇ ಬೋನ್ಸಾಯ್ ಗಿಡಗಳನ್ನು ಬೆಳೆಸುವುದರಲ್ಲಿ ಆಸಕ್ತಿ ಇತ್ತು. ಅವರು ತಮ್ಮ ಜೀವನವನ್ನು ಬೋನ್ಸಾಯ್ ಗಿಡ ಬೆಳೆಸುವುದರೊಂದಿಗೆ ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಪಾನ್ ದೂತಾವಾಸ ಮುಖ್ಯಸ್ಥ ಮತ್ತು ಸಲಹೆಗಾರ ಜುನಿಚಿ ಕಾವೇ ಮಾತನಾಡಿ, “ಈ ಬೋನ್ಸಾಯ್ ಸಮ್ಮೇಳನಕ್ಕೆ ಆಗಮಿಸಿರುವುದು ತುಂಬಾ ಸಂತಸವಾಗಿದೆ. ಬೋನ್ಸಾಯ್ ಬೇಸಾಯಕ್ಕೆ ಒಂದು ಸಾವಿರ ವರ್ಷ ಇತಿಹಾಸವಿದೆ. ಗಂಧದ ಮರ ಕರ್ನಾಟಕ ರಾಜ್ಯದ ಸಾಂಕೇತಿಕ ಮರವಾಗಿದೆ. ಕರ್ನಾಟಕವು ಜಾನಪದ ಸಂಸ್ಕೃತಿಗೆ ಜನಪ್ರಿಯವಾಗಿದೆ. ಪರಿಸರದ ಉಳಿವಿಗಾಗಿ ಬೋನ್ಸಾಯ್ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಭಾರತದಲ್ಲಿ ಕಿಷ್ಕಿಂಧ ಮೂಲಿಕಾ ಬೋನ್ಸಾಯ್ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
ತದನಂತರ `ಬೆಹೈಂಡ್ ದಿ ಸ್ಪಿರಿಟ್ ಆಫ್ ಮಿನಿಯೇಚರ್ ಲ್ಯಾಂಡ್ ಸ್ಕೇಪ್’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಜಪಾನ್ ನ ಜಿರೊ ಫಕುಡ, ಆಸ್ಟ್ರೇಲಿಯಾದ ಲಿಂಡ್ಸೇ ಬೆಬ್, ತೈವಾನ್ ನ ಚೆನ್ ತ್ಸ್ಯಾಂಗ್ ಶಿಂಗ್, ಯು.ಎಸ್.ಎ. ಯ ವಾಲ್ಟರ್ ಲೀವ್, ಸಿಂಗಾಪೂರ್ ನ ಬೊ ತ್ವಾನ್ ಕೆಂಗ್ ಮತ್ತು ಹೈದ್ರಾಬಾದ್ ನ ಮಧುಸೂಧನ್ ಅವರಿಗೆ `ದತ್ತ ಪೀಠಂ ಸಸ್ಯ ಬಂಧು’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾವೇಶದಲ್ಲಿ ಆಸ್ಟ್ರೇಲಿಯಾದ ಘೆನೀಸ್ ಬೆಬ್, ತೈವಾನ್ ನ ಆಲ್ಬರ್ಟ್ ಚಾಂಗ್ ಮತ್ತು ಚೀನ್ ಚಾಂಗ್ ಲಿ, ಆಸ್ಟ್ರೇಲಿಯಾದ ಟೋನಿ ಬೆಬ್, ಜಪಾನ್ ನ ನೇಮಿ ಇವಾಸ್ಕಿ ಮತ್ತು ಮಿತ್ಸು ಮತ್ಸುಡ, ವಿಯೆಟ್ನಾಂ ನ ನ್ಯುಯೆನ್ ಥಾನ್ ಟಾಮ್, ಭಾರತದ ಜ್ಯೋತಿ ಪರೇಕ್ ಮತ್ತು ನಿಕುಂಜ್ ಪರೇಕ್ ಉಪಸ್ಥಿತರಿದ್ದರು.