ಮೈಸೂರು: ರಂಗಾಯಣ ಕಲಾವಿದ ಮಂಜುನಾಥ್ ಬೆಳೆಕೆರೆ ಅನಾರೋಗ್ಯದಿಂದ ಸೋಮವಾರದಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಹರಿಹರದ ಮೂಲದವರಾದ ಮಂಜುನಾಥ್ ಅವರು 1989ರಿಂದಲೂ ರಂಗಾಯಣದಲ್ಲಿ ಸಕ್ರಿಯ ಕಲಾವಿದರಾಗಿದ್ದರು. ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಿ.ವಿ.ಕಾರಂತ ಸೇರಿದಂತೆ ಖ್ಯಾತನಾಮರ ಜೊತೆ ಒಡನಾಟವನ್ನಿಟ್ಟುಕೊಂಡಿದ್ದರು.
ಸಂತಾಪ: ಕಲಾವಿದ ಮಂಜುನಾಥ ಬೆಳಕೆರೆ ಅವರ ಅಕಾಲಿಕ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ಕಲಾಜಗತ್ತಿಗೆ ವಿದಾಯ ಹೇಳಿದ ಮಂಜುನಾಥ ಬೆಳಕೆರೆ ರಂಗಾಯಣದ ಪ್ರತಿಭಾವಂತ ಕಲಾವಿದರಾಗಿದ್ದರು. ಅವರ ರಚನೆಯ `ಇಡೀ ಮುಂಡೇ ಮಗಳು’ ಹಾಗೂ `ಶರೀಫ’ ನಾಟಕಗಳು ಅವರ ಪ್ರಖರ ಪ್ರತಿಭೆಗೆ ಸಾಕ್ಷಿಯಾಗಿದ್ದವು. ಅವರ ನಿಧನದಿಂದ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರುತ್ತೇನೆ ಎಂದು ಸಚಿವೆ ಉಮಾಶ್ರೀ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.