ಮೈಸೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಸಿಬಿಐ ದಾಳಿ ನಡೆಸುತ್ತಿದ್ದು, ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ ಮಾಡಿದರು.
ಮಂಗಳವಾರ ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, ದೆಹಲಿ ಪೊಲೀಸ್ ಆಕ್ಟ್ ಸೆಕ್ಷನ್ 6ರ ಪ್ರಕಾರ ರಾಜ್ಯಗಳ ಅನುಮತಿ ಇಲ್ಲದೆ ಕೇಂದ್ರ ಸರ್ಕಾರಕ್ಕೆ ಸಿಬಿಐ ದಾಳಿ ನಡೆಸುವ ಅಧಿಕಾರ ಇಲ್ಲ. ಆದರೂ ರಾಜ್ಯದ ಮೇಲೆ ಪದೇ ಪದೇ ದಾಳಿ ನಡೆಸಿ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರನ್ನು ಬಿಟ್ಟು ಅಧಿಕಾರಿಗಳ ಮೇಲೆ ದಾಳಿ ಮಾಡಿ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಇನ್ನೊಂದು ನ್ಯಾಯ ಎಂಬ ಧೋರಣೆ ಪ್ರದರ್ಶಿಸುತ್ತಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಬಿಐ ವಿಚಾರಣೆ ಎದುರಿಸುತ್ತಿದ್ದ 17 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಮಿತ್ ಷಾ, ಜನಾರ್ಧನ್ ರೆಡ್ಡಿ, ಯಡಿಯೂರಪ್ಪ ಖುಲಾಸೆಯಾಗಿದ್ದಾರೆ ಎಂದು ಕಿಡಿ ಕಾರಿದರು.
ಜನಾರ್ಧನ್ ರೆಡ್ಡಿ ಮಗಳ ಮದುವೆಗೆ 500 ಕೋಟಿ ರೂ. ಖರ್ಚು ಮಾಡಿದ್ದರೂ ಸಿಬಿಐ ತನಿಖೆ ಮಾಡಿಲ್ಲ. ಕೆಎಎಸ್ ಅಧಿಕಾರಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡರೂ ಯಾವುದೇ ತನಿಖೆಯಾಗಿಲ್ಲ. ದೆಹಲಿ ಕಾರ್ಪೋರೇಟರ್ ಸೆಕ್ಟರ್ ಡಿಜಿ ಕುಟುಂಬ ಡೆತ್ ನೋಟ್ ನಲ್ಲಿ ಅಮಿತ್ ಷಾ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದರೆ ಕಾಂಗ್ರೆಸ್ ನಾಯಕರನ್ನೇ ಟಾರ್ಗೇಟ್ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ಮೂವರು ಸಚಿವರ ತಲೆದಂಡವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸಿಬಿಐ ತನಿಖೆ ಎದುರಿಸಿ ಜೈಲಿಗೆ ಹೋಗಿ ಬಂದವರಿಗೆ ನಮ್ಮ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ. ಅವರು ಕೇವಲ ಸಂಸದರಷ್ಟೆ. ಅವರಿಗೆ ಸಿಬಿಐ ದಾಳಿ ನಡೆಸುತ್ತದೆ ಎಂಬ ಮಾಹಿತಿ ನೀಡಿದವರು ಯಾರು. ಒಂದು ವೇಳೆ ಅವರಿಗೆ ಮಾಹಿತಿ ಇರುವುದು ನಿಜವೇ ಆದರೆ ಮೊದಲು ಅವರ ವಿರುದ್ಧ ತನಿಖೆ ನಡೆಸಬೇಕು. ರೂಮರ್ ಸ್ಪ್ರೆಡಿಂಗ್ ಸೊಸೈಟಿಯಲ್ಲಿ ಪಳಗಿರುವುದರಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹೆಚ್.ವೈ.ಮೇಟಿ ಪ್ರಕರಣ ಸಂಬಂಧ ಮಾತನಾಡಿದ ಅವರು, ಅವರ ವರ್ತನೆಯಿಂದ ಪಕ್ಷಕ್ಕೆ ತೀವ್ರ ಮುಜಗರವಾಗಿದೆ. ಇದು ತೀವ್ರ ನಾಚಿಕೆಗೇಡಿನ ಸಂಗತಿ ಎಂದರು. ಮಡಿಕೇರಿಯ ದಿಡ್ಡಿಹಳ್ಳಿಯಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಪಡೆಯಲಾಗಿದ್ದು ಮೂಲ ವಾಸಿಗಳಿಗೆ ನಿವೇಶನ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಪಕ್ಷದ ಮುಖಂಡ ಚಿದಂಬರಂ ಜಾಗ ಒತ್ತುವರಿ ಮಾಡಿಕೊಂಡಿರುವ ಮಾಹಿತಿ ಇದ್ದರೆ ನೀಡಲಿ ಎಂದು ಸಂಸದ ಪ್ರತಾಪ್ಸಿಂಹ ಅವರಿಗೆ ತಿರುಗೇಟು ನೀಡಿದರು.
ನೋಟು ಅಮಾನ್ಯಗೊಳಿಸುವಲ್ಲಿ ಕೇಂದ್ರ ಸಕರ್ಾರ ದಿನಕ್ಕೊಂದು ನಿಧರ್ಾರ ತೆಗೆದುಕೊಳ್ಳುತ್ತಿದ್ದು, ನ.8ರಿಂದ ಇಲ್ಲಿಯವರೆಗೆ 52 ಬದಲಾವಣೆಗಳನ್ನು ಮಾಡಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ. ಈ ಸಮಸ್ಯೆ ಜ.1ರಿಂದ ಮತ್ತಷ್ಟು ಬಿಗಡಾಯಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ರವಿಶಂಕರ್, ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ರೇವಣ್ಣ, ಸೀತಾರಾಮ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.