ಮೈಸೂರು: ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ 13ನೇ ಬ್ಯಾಚ್ ಬಿ.ಎಸ್ಸಿ. ನರ್ಸಿಂಗ್, 16 ನೇ ಬ್ಯಾಚ್ ಜಿ.ಎನ್.ಎಂ. ಮತ್ತು 13 ನೇ ಬ್ಯಾಚ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗುವಿಕೆ ಮತ್ತು 8 ನೇ ಬ್ಯಾಚ್ ಬಿ.ಎಸ್.ಸಿ.ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವೈದ್ಯರಾದ ಡಾ.ಬಿ.ಹೆಚ್. ಮಂಜುನಾಥ್ ಅವರು ಪ್ರಮಾಣ ವಚನ ಬೋಧಿಸಿದರು.
ಕುವೆಂಪು ನಗರದ ಶ್ರೀ ಬಂದಂತಮ್ಮ ಕಾಳಮ್ಮ ಭವನದಲ್ಲಿ ಗುರುವಾರ ಬಿ.ಜಿ.ಎಸ್. ನರ್ಸಿಂಗ್ ಕಾಲೇಜು ವತಿಯಿಂದ 13ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್, 16ನೇ ಬ್ಯಾಚ್ ಜಿ.ಎನ್.ಎಂ. ಮತ್ತು 13ನೇ ಬ್ಯಾಚ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗುವಿಕೆ ಮತ್ತು 8ನೇ ಬ್ಯಾಚ್ ಬಿ.ಎಸ್.ಸಿ.ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಮಾತನಾಡಿದ ಡಾ. ಮಂಜುನಾಥ್ ಅವರು, ಭಾರತ ಸನಾತನ ಸಂಸ್ಕೃತಿಯನ್ನು ಹೊಂದಿರುವ ದೇಶ. ಹತ್ತು ಸಾವಿರ ವರ್ಷಗಳ ಹಿಂದಿನ ಸಂಸ್ಕೃತಿ ಇಂದಿಗೂ ತನ್ನ ನೈಜತ್ವವನ್ನು ಕಳೆದುಕೊಳ್ಳದೇ ಹಾಗೆಯೇ ಇದೆ. ಈ ನಿಟ್ಟಿನಲ್ಲಿ 21ನೇ ಶತಮಾನದಲ್ಲಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ. ಇದಕ್ಕೆ ಕಾರಣ ತಮ್ಮ ಜೀವಮಾನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟ ಹಲವಾರು ಸಂತರು, ಮಹನೀಯರು, ಬುದ್ಧಿಜೀವಿಗಳು ಎಂದು ಅಭಿಪ್ರಾಯಪಟ್ಟರು.
ಇಂದು ಹಣ ಇದೆ. ಆದರೆ ಆರೋಗ್ಯ ಇಲ್ಲ. ವೈದ್ಯರ ಜವಾಬ್ದಾರಿ ರೋಗಿಗಳ ಜೀವ ಕಾಪಾಡುವುದು. ಅಂತೆಯೇ ನರ್ಸಿಂಗ್ ವೃತ್ತಿ ತುಂಬಾ ಪವಿತ್ರವಾದುದು. ಜನರ ಸೇವೆ ಮಾಡುವುದರಲ್ಲಿ ತೃಪ್ತಿ ಕಾಣುವ ಈ ವೃತ್ತಿ ನಿಜಕ್ಕೂ ಅತ್ಯುತ್ತಮವಾದುದು. ಇಡೀ ವಿಶ್ವದಲ್ಲಿ ಇದಕ್ಕಿಂತ ದೊಡ್ಡ ವೃತ್ತಿ ಮತ್ತೊಂದಿಲ್ಲ. ಇಂಜಿನಿಯರ್ ಗಳು ಯಂತ್ರಗಳ ಜೊತೆ ಮಾತನಾಡುತ್ತಾರೆ. ಆದರೆ ನರ್ಸ್ ಗಳು ಜೀವಗಳ ಜೊತೆ ಮಾತನಾಡುತ್ತಾ ದೇವರ ಸ್ಥಾನದಲ್ಲಿ ನಿಲ್ಲುತ್ತಾರೆ. ವೈದ್ಯರಿಗೆ ಮತ್ತು ನರ್ಸ್ ಗಳಿಗೆ ತಮ್ಮ ವೈಯಕ್ತಿಕ ಕುಟುಂಬದೊಂದಿಗೆ ರೋಗಿಗಳ ಕುಟುಂಬವೂ ಸಹ ಇರುತ್ತದೆ. ನರ್ಸ್ ಗಳಿಗೆ ಬರುವ ಸಂಭಾವನೆ ಕಡಿಮೆಯೇ ಇರಬಹುದು. ಅದು ಗೌರವ ಧನ ಎಂದು ತಿಳಿದು, ಸಮಾಜಕ್ಕೆ ಮತ್ತು ದೇಶಕ್ಕೆ ದುಡಿಯುತ್ತಿದ್ದೇವೆ ಎಂಬ ಸೇವಾ ಮನೋಭಾವನೆಯಿಂದ ರೋಗಿಗಳ ಶುಶ್ರೂಷೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿ.ಬಿ. ಅಂಡ್ ಸನ್ಸ್ ನ ಬೋರಯ್ಯ, ಬಿ.ಜಿ.ಎಸ್. ಪ್ಯಾರಾ ಮೆಡಿಕಲ್ ಕಾಲೇಜಿನ ಡಾ.ಗಣೇಶ್, ಜಿಲ್ಲಾ ನರ್ಸಿಂಗ್ ಆಫೀಸರ್ ಕಾವೇರಿ, ಬಿ.ಜಿ.ಎಸ್. ಆಸ್ಪತ್ರೆಯ ನರ್ಸಿಂಗ್ ಸೂಪರಿಂಡೆಂಟ್ ಆನಿ ರೇಚಲ್, ಪ್ರಾಂಶುಪಾಲೆ ಎನ್.ಟಿ.ಅರುಣಾ ದೇವಿ ಉಪಸ್ಥಿತರಿದ್ದರು.