ನಂಜನಗೂಡು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಗುರುವಾರ ಶ್ರೀಕಂಠೇಶ್ವರ ದೇವಾಲಯಕ್ಕೆ ಭೆೇಟಿ ನೀಡಿ ಶ್ರೀಕಂಠೇಶ್ವರನ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ಅವರನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಮತ್ತು ಅರ್ಚಕವೃಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಬರಮಾಡಿಕೊಂಡು ಫಲ ತಾಂಬೂಲ ವಸ್ತ್ರ ನೀಡಿ ಗೌರವಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ ನಂಜನಗೂಡಿನ ಉಪ ಚುನಾವಣೆಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಪಕ್ಷೇತರರಾಗಿ ಸ್ಪರ್ಧಿಸಿದ್ದರೆ ಅವರಿಗೆ ನಮ್ಮ ಬೆಂಬಲವಿತ್ತು ಆದರೆ ಬೇರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಕಾರಣ ನಮ್ಮ ಪಕ್ಷದ ಜಿಲ್ಲಾ ಮತ್ತು ತಾಲೂಕು ಮುಖಂಡರ ಜೊತೆ ಚರ್ಚಿಸಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಮತದ ಅಂತರದಿಂದ ಕಳಲೆ ಕೇಶವಮೂರ್ತಿಯವರು ಸೋಲನ್ನು ಅನುಭವಿಸಿದ್ದು ಕ್ಷೇತ್ರದಲ್ಲಿ ಅವರಿಗೆ ಉತ್ತಮ ಜನಾಭಿಪ್ರಾಯವಿದ್ದು ಈ ಉಪ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದರು.
ಹಿಂದಿನ ರಾಜಕೀಯಕ್ಕೂ ಪ್ರಸಕ್ತ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದ್ದು ನನಗೆ ತುಂಬಾ ಬೇಸರ ತಂದಿದೆ ಎಂದರು. ಬಿ.ಎಸ್.ಯಡಿಯೂರಪ್ಪರವರು ರಾಜ್ಯ ಸರ್ಕಾರದ ಇನ್ನೂ ಮೂವರು ಸಚಿವರು ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡುತ್ತಾರೆ ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂದು ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರವಿದ್ದು ಅವರು ಸಂಸದರಾಗಿರುವುದರಿಂದ ಕೇಂದ್ರ ಗುಪ್ತಚರ ಇಲಾಖೆಯಿಂದ ಅವರಿಗೆ ಮಾಹಿತಿ ಇರಬಹುದು ಆದ್ದರಿಂದ ಅವರು ಆ ರೀತಿಯ ಹೇಳಿಕೆ ನೀಡಿರಬಹುದು ಎಂದರು.
ನೋಟಿನ ಅಮಾನ್ಯಕರಣದ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರದ ಈ ನಿಲುವಿನಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ನನಗೆ ಅರ್ಚಕರಿಗೆ ಹಣಕೊಡಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು ಸಾಮಾನ್ಯರ ಗತಿ ಏನು? ಎಂದು ಕೇಳಿದರು.
ಇದೇ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತ್ತಿಬ್ಬೇಗೌಡ, ಮೈಸೂರು ಮಹಾನಗರ ಪಾಲಿಕೆ ಮೇಯರ್ ರವಿಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ಕಳಲೆ ಕೇಶವಮೂರ್ತಿ, ನಗರಸಭಾ ಸದಸ್ಯರಾದ ಮಂಜುನಾಥ್, ವಿಜಯಾಂಬಿಕಾ ಪುಟ್ಟರಾಜು, ದೊಡ್ಡಮಾದಯ್ಯ, ಚಲುವರಾಜು, ಗ್ರಾ.ಪಂ.ಸದಸ್ಯ ಮಹದೇವು, ಸೇರಿದಂತೆ ಹಲವಾರು ಪ್ರಮುಖರು ಇದ್ದರು.