ಮೈಸೂರು: ಬ್ಯಾಂಕ್ ಮತ್ತು ಕೈ ಸಾಲ ಮಾಡಿಕೊಂಡಿದ್ದ ರೈತನೊಬ್ಬ ಕೃಷಿಯಲ್ಲಿ ನಷ್ಟವಾದ್ದರಿಂದ ಧಾನ್ಯಗಳು ಕೆಡದಂತೆ ಉಪಯೋಗಿಸುವ ವಿಷದ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಮಾದಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮಾದಳ್ಳಿ ಗ್ರಾಮದ ಯುವ ರೈತ ಬೀರೇಶ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಕೃಷಿ ಬಗ್ಗೆ ಒಲವು ಹೊಂದಿದ್ದನು. ಅಲ್ಲದೆ ತಮಗಿದ್ದ ಕೃಷಿ ಭೂಮಿಯಲ್ಲಿ ಬೆಳೆಬೆಳೆಯುವ ಸಲವಾಗಿ ಮಾವತ್ತೂರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 2ಲಕ್ಷ ಮತ್ತು ಸುಮಾರು 1ಲಕ್ಷ ರೂ.ನಷ್ಟು ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಾಲ ಮಾಡಿ ಕೃಷಿ ಮಾಡಿದ್ದರೂ ಅದು ಕೈಕೊಟ್ಟಿತು. ಇದರಿಂದ ಸಾಲ ಹೆಚ್ಚಾಯಿತಲ್ಲದೆ, ಬಡ್ಡಿಕಟ್ಟುವುದೇ ಕಷ್ಟವಾಗಿ ಪರಿಣಮಿಸುತು ಎನ್ನಲಾಗಿದೆ. ಕೈಸಾಲ ನೀಡಿದವರು ದುಡ್ಡಿಗಾಗಿ ಪೀಡಿಸುತ್ತಿದ್ದರು ಈ ಎಲ್ಲ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದ ಆತ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ದ್ವಿದಳಧಾನ್ಯಗಳು ಕೆಡದಂತೆ ಹಾಕುವ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದನು. ತಕ್ಷಣ ಮನೆಯವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಆತನಿಗೆ ಚಿಕಿತ್ಸೆ ನೀಡಿದರಾದರೂ ಅದು ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರದ ಕಾರಣ ರೈತರ ಬದುಕು ಕಷ್ಟಕರವಾಗಿದ್ದು, ಜೀವನಕ್ಕಾಗಿ ಕೆಲವರು ಪಟ್ಟಣದ ಹಾದಿ ಹಿಡಿಯುತ್ತಿದ್ದಾರೆ. ಇನ್ನು ಕೆಲವು ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಮೂರಾಬಟ್ಟೆಯಾಗುತ್ತಿದೆ. ಇನ್ನಾದರೂ ಸರ್ಕಾರ ನೆರವಿಗೆ ಧಾವಿಸಬೇಕಾಗಿದೆ.