ಮೈಸೂರು: ರಾಜ್ಯದಲ್ಲಿ ದಲಿತರು ಸಿಎಂ ಆಗುವುದನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ತಡೆದು ಪರಮೇಶ್ವರನ್ನ ಸೋಲಿಸಿ ಕಿವುಡ ಮೂಗ ಶಾಲೆಯ ಮುಖ್ಯೊಪಾದ್ಯಯರನ್ನಾಗಿ ಮಾಡುವ ಮೂಲಕ ದಲಿತರನ್ನ ವ್ಯವಸ್ಥಿತವಾಗಿ ಸಿದ್ದರಾಮಯ್ಯ ಮುಗಿಸಿದರು ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ 90 ನಿಮಿಷಗಳ ಕಾಲ ತಮ್ಮ ಸುದೀರ್ಘ ಪತ್ರಿಕಾಗೋಷ್ಟಿಯಲ್ಲಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ದಲಿತನೊಬ್ಬ ಸಿ.ಎಂ ಆಗೊದನ್ನ ಸಿದ್ದರಾಮಯ್ಯ ವ್ಯವಸ್ಥಿತವಾಗಿ ತಡೆದಿದ್ದಾರೆ. ಖರ್ಗೆಯನ್ನ ಕೇಂದ್ರಕ್ಕೆ ಕಳಿಸಿ 45 ಜನರಿಗೆ ನಾಯಕರನ್ನಾಗಿ ಮಾಡಲಾಗಿದೆ. ಪರಮೇಶ್ವರ್ ಸೋಲಿಸಿ ಮೂಗ ಕಿವುಡ ಶಾಲೆಗೆ ಮುಖ್ಯೋಪಾಧ್ಯಾಯರನ್ನಾಗಿ ಮಾಡಲಾಗಿದ್ದು, ನನ್ನನ್ನು ಸಚಿವ ಸಂಪುಟದಿಂದ ತೆಗೆದು ವ್ಯವಸ್ಥಿತವಾಗಿ ಮುಗಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಗಂಭೀರ ಆರೋಪ ಮಾಡಿದರು. ನನ್ನ ರಾಜಕೀಯ ಜೀವನದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇನೆ. 45 ವರ್ಷದ ರಾಜಕೀಯ ಜೀವನದಿಂದ ಗೌರವಾನ್ವಿತ ನಿವೃತ್ತ ಬಯಸಿದ್ದೆ, ಆದರೆ ಹತ್ತಿರಲ್ಲೆ ಇದ್ದ ಸಿದ್ದರಾಮಯ್ಯ ಮಾಸದ ಗಾಯ ಮಾಡಿಬಿಟ್ಟರು ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ಪ್ರಸಾದ್ ನೋವಿನಿಂದ ನುಡಿದರು.
ನನ್ನನ್ನು ಸಂಪುಟದಿಂದ ಬಿಟ್ಟಿದ್ದಕ್ಕೆ ಬೇಸರವಿಲ್ಲ. ಆದರೆ ಬಿಡುವುದಕ್ಕೆ ನೀಡಿದ ಕಾರಣದಿಂದ ಬೇಸರವಾಗಿದೆ. ಬಲಿಷ್ಠ ಸಂಪುಟದಲ್ಲಿ ಯಾವ ಯಾವ ಅಣಿಮುತ್ತುಗಳಿದ್ದಾರೆ ಅಂತ ಇಂದು ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ. ಒಬ್ಬ ದಲಿತನಾಯಕ ಇರಬೇಕು ಅಂತ ಕಾಂಗ್ರೆಸ್ ಹೈಕಮಾಂಡ್ ಸಹ ಹೇಳಿತ್ತು. ಸಿದ್ದರಾಮಯ್ಯ ಹೈಕಮಾಂಡ್ ಮಾತು ಕೇಳಲಿಲ್ಲ. ಆ ಕುರಿತು ನಾನು ತೀಕ್ಷವಾಗಿ ಪ್ರತಿಕ್ರಿಯಿಸಿದರೂ ಅದನ್ನು ಪ್ರಶ್ನಿಸಲು ಕಾಂಗ್ರೆಸ್ನವರಿಗೆ ನೈತಿಕತೆಯೇ ಇರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಈ ಕಾರಣಕ್ಕೆಯೇ ನನ್ನ ಮುಂದಿನ ನಿರ್ಧಾರ ಕೈಗೊಂಡು ಮತ್ತೊಂದು ಪಕ್ಷ ಸೇರುವ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ಬಿಟ್ಟು ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದೇನೆ ಎಂದರು.
ಮಲ್ಲಿಕಾರ್ಜುನ ಖರ್ಗೆ ನನ್ನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನೀವು ಮಂತ್ರಿಯಾಗಲೂ ನಾನು ಸಹಾಯ ಮಾಡಿದ್ದೇನೆ. ಈಗ ಯಾವ ಮುಖ ಇಟ್ಟುಕೊಂಡು ಬರುತ್ತೀರಾ? ದಲಿತರಿಗೆ ಅನ್ಯಾಯವಾದಾಗ ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಯಾಕೆ ಮೌನವಾಗಿದ್ದರು. ಇವರಿಬ್ಬರಿಗೂ ಮಾನ, ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯಕ್ಕೆ ಯಾರು ವಾರಸ್ದಾರರಲ್ಲ. ಬುದ್ದನ ಬಗ್ಗೆ ಹಿಂದೆ ಯಾವತ್ತಾದ್ದರೂ ಮಾತನಾಡಿದ್ದೀರಾ ನೀವು. ಬುದ್ದನ ಬಗ್ಗೆ ಏನ್ ಗೊತ್ತು ನಿಮಗೆ. ಅಂಬೇಡ್ಕರ್ ಬಗ್ಗೆ ಯಾಕೆ ಮಾತನಾಡುತ್ತೀರಿ. ಅಂಬೇಡ್ಕರ್ ಹೆಸರನ್ನು ರಾಜಕೀಯಕ್ಕೆ ಯಾಕೆ ಬಳಸುತ್ತೀದ್ದೀರಿ, ಸೆಕ್ಯೂಲರಿಸಂ ಅಂದರೆ ಏನಂತ ಗೊತ್ತಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಕುಪ್ಪೆಗಾಲದ ಪ್ರಕರಣದ ಬಗ್ಗೆ ಯಾಕೆ ಮಾತನಾಡಲಿಲ್ಲ. ಅವರ ಹುಟ್ಟೂರಿನ ಪಕ್ಕದಲ್ಲೆ ಇದ್ದ ಶಾಲೆಯಲ್ಲಿ ಅಸ್ಪೃಶ್ಯತೆ ಇದ್ದಾಗ ಎಲ್ಲಿ ಹೋಗಿದ್ದರು. ನಾನು ಜಿಲ್ಲಾ ಮಂತ್ರಿಯಾಗಿದ್ದ ವೇಳೆ ಅವರನ್ನು ಒಂದೆರಡು ಮಾತು ಆಡಿ ಎಂದಿದ್ದಕ್ಕೆ ನೀವೆ ಇದ್ದೀರಲ್ಲ ಎಂದು ಸಮಜಾಯಿಸಿ ನೀಡಿದ್ದರು. ಆದರೆ ಮೈಸೂರು ಭೇಟಿ ದಿನ ಪ್ರತಿಭಟನೆ ಆಗುತ್ತೆ ಅಂತ ತಿಳಿದು ರಾತ್ರೋರಾತ್ರಿ ಮೀಟಿಂಗ್ ಮಾಡಿ ಸಮಾಧಾನ ಮಾಡಿದರು. ಅಂಥಹವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೀರಾ? ನಿಮ್ಮ ಒಂದು ಮುಖ ಮಾತ್ರ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರ ಇನ್ನೊಂದು ಮುಖ ಜನರಿಗೆ ತಿಳಿಯಬೇಕಿದೆ ಎಂದರು.
ನಾನು ಒಬ್ಬ ಬುದ್ದಿಸ್ಟ್: ಬಿಜೆಪಿ ಅವರು ಬೌದ್ದರಿಗೆ ಪ್ರವೇಶವಿಲ್ಲ ಅಂತಾ ಹೇಳಿದ್ದಾರಾ ? ಜಾತಿ ಗಣತಿ ವೇಳೆ ನಾನು ಬೌದ್ಧ ಅಂತಾ ನಮೂದಿಸಿದ್ದೇನೆ. ಕಾರಿನ ಮೇಲೆ ಕಾಗೆ ಕುಳಿತ ತಕ್ಷಣ ನೀವು ಕಾರು ಬದಲಾಯಿಸಲಿಲ್ಲವೇ? ಹೆಲಿಕಾಪ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ನೀವು ತಿರುಪತಿಗೆ ಕುಟುಂಬ ಸಮೇತ ಹೋಗಿ ಪೂಜೆ ಮಾಡಲಿಲ್ಲವೇ? ಆದ್ರೂ ನೀವು ಧರ್ಮದ ಆಚಾರಗಳ ಬಗ್ಗೆ ಮಾತನಾಡುತ್ತೀರಾ? ಎಂದು ತೀಕ್ಷ್ಣವಾಗಿ ಸಿದ್ದರಾಮಯ್ಯ ನಡೆಯ ಬಗ್ಗೆ ಪ್ರತಿಕ್ರಿಯಿಸಿದರು. ದಲಿತರು ಬದಲಾವಣೆ ಆಗಬೇಕು. ಅಂತೇಯೆ ಆರ್ ಎಸ್ ಎಸ್ ಕೂಡ ಬದಲಾವಣೆ ಆಗಬೇಕು. ಸ್ವಚ್ಛ ಭಾರತದ ರೀತಿಯಲ್ಲಿ ಮನಸ್ಸುಗಳು ಬದಲಾಗಬೇಕು. ಮೊದಲು ಪೊರಕೆ ಹಿಡಿಯಲು ಹಿಂಜರಿಯುತ್ತಿದ್ದರು. ಇಂದು ಎಲ್ಲರೂ ಪೊರಕೆ ಹಿಡಿದು ಸ್ವಚ್ಛ ಭಾರತಕ್ಕೆ ಬೆಂಬಲ ನೀಡಿಲ್ಲವೇ. ಮುಂದೊಂದು ದಿನ ಸ್ವಚ್ಛ ಭಾರತ ಎಂಬ ಚಿಂತನೆ ದೇಶದ ಎಲ್ಲರ ಮನಸ್ಸಿನಲ್ಲಿಯೇ ಬರಲಿದೆ. ಈ ಸ್ವಚ್ಛ ಭಾರತ ಅದಕ್ಕೆಲ್ಲ ನಾಂದಿಯಾಗಲಿದೆ. ಬಿಜೆಪಿಯವರು ಅಸ್ಪೃಶ್ಯತೆ ಇರಲಿ ಅಂತ ಹೇಳ್ತಾರಾ. ಮೋದಿ ಪ್ರಧಾನಿಯಾಗಿದ್ದೇ ಅಂಬೇಡ್ಕರ್ ಮೂಲ ಚಿಂತನೆಯಿಂದ. ಬಿಜೆಪಿಯಲ್ಲಿ ಸಮಾನತೆ ಇಲ್ಲ ಅಂತ ಯಾರು ಹೇಳಿದ್ದು. ಅಂಬೇಡ್ಕರ್ ಬಗ್ಗೆ ಮಾತನಾಡುವ ಮುನ್ನ ಅವರ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯನವರೇ ನೀವು ನಂಬಿಕೆ ದ್ರೋಹಿ. ನಾನು ಯಾವ ಯಾವ ಸಮಯದಲ್ಲಿ ನಿಮ್ಮ ಕೈ ಹಿಡಿದೆ ಅಂತ ಹೇಳಿ. ನೀವು ಹೇಗೆ ರಾಜಕೀಯದಲ್ಲಿ ಉಳಿದಿಕೊಂಡಿದ್ದು ಅಂತ ಹೇಳಿ. ನನ್ನ ಪ್ರತಿ ಪ್ರಶ್ನೆಗಳಿಗೂ ನೀವು ಉತ್ತರ ನೀಡಬೇಕು ಎಂದರು. ಸಂಪುಟದಿಂದ ನನ್ನನ್ನು ಕೈ ಬಿಟ್ಟಿದ್ದಕ್ಕೆ ಕಾರಣ ಕೊಡಬೇಕು. ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಬಿಜೆಪಿ ಜೊತೆ ಹೋಗಲು ಸಿದ್ದರಾಗಿದ್ದರು. ಜೆಡಿಎಸ್ನಿಂದ ಹೊರಬಂದು ಅಡ್ವಾಣಿಯನ್ನೂ ಭೇಟಿ ಮಾಡಿದ್ದರು. ನನಗೆ ಬೆಂಬಲ ನೀಡಿ ನಾನು ಸರ್ಕಾರ ರಚನೆ ಮಾಡುತ್ತೀನಿ ಅಂತಲೂ ಹೇಳಿದ್ದರು. ಆಗ ಆಡ್ವಾಣಿ ಮೊದಲು ಬೆಂಬಲಿಗರನ್ನು ಕರೆದುಕೊಂಡು ಬನ್ನಿ ಅಂತ ವಾಪಸ್ ಕಳುಹಿಸಿದ್ದರು. ಅಂದು ಸಹ ಮುಖ್ಯಮಂತ್ರಿಯಾಗೋದೆ ಅವರ ಬಹುದೊಡ್ಡ ಗುರಿಯಾಗಿತ್ತು. ಮುಂದೆ ಅಧಿಕಾರಕ್ಕಾಗಿ ಅವರು ಜೆಡಿಎಸ್ ಜೊತೆ ಹೋಗ್ತಾರಾ ಅಂತ ಅವರನ್ನೆ ಕೇಳಿ. ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಹೇಳೋಕೆ ಅರ್ಧ ದಿನ ಬೇಕು. ಹಿಂದೆ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ್ದು ರಾಜಕೀಯ ಸನ್ನಿವೇಶಕ್ಕಾಗಿ ಅಷ್ಟೇ. ಅಂತಿಮವಾಗಿ ನನ್ನನ್ನು ಆಯ್ಕೆ ಮಾಡಿದ ಜನರು ಬಿಜೆಪಿ ಸೂಚಿಸಿದರು. ಈ ಕಾರಣಕ್ಕಾಗಿಯೇ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದರು.