ಮೈಸೂರು: ಜನವರಿ 13 ರಿಂದ 18 ರ ವರೆಗೆ ಮೈಸೂರಿನ ರಂಗಾಯಣದಲ್ಲಿ ಆರು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವವನ್ನು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಖ್ಯಾತ ನಟ ಓಂಪುರಿ ಉದ್ಘಾಟಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ ತಿಳಿಸಿದರು.
ರಂಗಾಯಣದ ಆವರಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ನಾಟಕೋತ್ಸವದ ಪೋಸ್ಟರ್ ಗಳನ್ನು ದಯಾನಂದ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ಉತ್ಸವದಲ್ಲಿ ವಿದೇಶಗಳ ನಾಲ್ಕು ನಾಟಕಗಳು ಸೇರಿದಂತೆ ಭಾರತದ ವಿವಿಧ ಭಾಷೆಯ 18 ನಾಟಕಗಳು ರಂಗಾಯಣದ ಭೂಮಿಗೀತ, ವನರಂಗ, ಕಲಾಮಂದಿರ ಮತ್ತು ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಶ್ರೀಲಂಕಾದ ಸೆಕ್ಕುವಾ (ಸಿಂಹಳೀಯ), ಪೋಲ್ಯಾಂಡ್’ನ ಸಚ್ ಈಸ್ ಲೈಫ್(ಇಂಗ್ಲಿಷ್), ಬಾಂಗ್ಲಾದೇಶದ ಅಮೀನಾ ಸುಂದರಿ(ಬಂಗಾಳಿ), ಲಂಡನ್ ನ ಮೀಡಿಯಾ(ಇಂಗ್ಲಿಷ್), ಅಲ್ಲದೇ ಹೈದ್ರಾಬಾದ್ ತಂಡದಿಂದ ತುಮ್ಹಾರ ವಿನ್ಸೆಂಟ್(ಹಿಂದಿ), ಜಮ್ಮು ಮತ್ತು ಕಾಶ್ಮೀರ ತಂಡದಿಂದ ಇಷ್ಕ್ ಮಲಂಗಿ(ಉರ್ದು), ಒಡಿಸ್ಸಾ ತಂಡದ ಘಿನುವ(ಒಡಿಯಾ), ಸಿಕ್ಕಿಂ ರಾಜ್ಯದ ಅಬ್ ಔರ್ ನಹೀ(ಹಿಂದಿ), ಕೇರಳದ ಮಧ್ಯಮ ವ್ಯಾಯೋಗ(ಸಂಸ್ಕೃತ), ಪಾಟ್ನಾದ ಹರ್ ಸಿಂಗಾರ್(ಹಿಂದಿ), ಕೇರಳದ ಚರಿತ್ರ ಪುಸ್ತಕತ್ತಿಲ್ಲೆಕ್ಕು ಒರೆಡು (ಮಲಯಾಳಂ) ಒಳಗೊಂಡಂತೆ ಕನ್ನಡದ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.