ಮೈಸೂರು: ಸ್ವಾಭಿಮಾನದಲ್ಲಿ ನಾನು ಯಾರಿಗೂ ಕಡಿಮೆ ಇಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಎಲ್ಲಿಯೂ ನಡೆದು ಕೊಂಡಿಲ್ಲ. ಕ್ಷೇತ್ರದ ಜನತೆಗೆ ಅಪಮಾನವಾಗುವುದನ್ನು ಸಹಿಸಿಕೊಳ್ಳುವುದಿಲ್ಲ. ಸ್ವಾಭಿಮಾನವೇ ನನ್ನ ಜೀವನವೆಂದು ಶ್ರೀನಿವಾಸ್ ಪ್ರಸಾದ್ ವಿರುದ್ಧ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಜಿಲ್ಲಾಡಳಿತ, ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಸಣ್ಣ ನೀರಾವರಿ, ಮುಜರಾಯಿ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಏರ್ಪಡಿಸಲಾಗಿದ್ದ ನಂಜನಗೂಡು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಜನರಿಂದ ನಾವು ಅಧಿಕಾರಿಕ್ಕೆ ಬಂದು ಅವರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಮಾತಿನಿಂದ ಕೆಲಸ ನಡೆಯದು. ಸ್ವಾಭಿಮಾನದ ಹೋರಾಟವಿರಬೇಕು ಎಂದರು.
ಅನೇಕ ವರ್ಷಗಳಿಂದ ನಂಜನಗೂಡು ಕ್ಷೇತ್ರ ಅಭಿವೃದ್ಧಿ ಕಾಣದೇ ನಿಂತಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಲು ಸದಾ ಸಿದ್ಧ. ಅದನ್ನು ಕೇಳಿ ಪಡದುಕೊಳ್ಳಬೇಕು. ಹಿಂದಿನ ಸಚಿವರು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಿಲ್ಲ. ಖಾಲಿ ಪಾತ್ರೆ ಶಬ್ದ ಜಾಸ್ತಿ ಮಾಡುತ್ತೆ. ತುಂಬಿದ ಪಾತ್ರೆ ಶಬ್ದ ಮಾಡುವುದಿಲ್ಲ ಎಂದು ಹಾಸ್ಯ ಭರಿತವಾಗಿ ಹೇಳಿದರು.
ಈಶ್ವರಪ್ಪ ಹಿಂದೆ ಸಂಘಟನೆ ಮಾಡುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಲ್ಪಸಂಖ್ಯಾತರ ಗುಂಪಿಗೆ ಸೇರುವ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಇತರರು ಮನುಷ್ಯರಲ್ಲವೇ? ಕೋಮುವಾದಿ ಪಕ್ಷದಿಂದ ಮನೆ-ಮನಸು ಎರಡೂ ಒಡೆದು ಹೋಗುತ್ತದೆ. ಆದರೆ ಕೆಲವರ ಕಣ್ಣಿಗೆ ಈ ಪಕ್ಷವೇ ಸುಂದರವಾಗಿ ಕಾಣುತ್ತಿರುವುದು ದುರಂತವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ನ್ಯಾಯಬದ್ಧತೆ, ಜಾತ್ಯಾತೀತೆಗೆ ಆದ್ಯತೆ ನೀಡಬೇಕು. ಕೋಮುವಾದ ಪಕ್ಷ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.
ಫೆಬ್ರವರಿ ತಿಂಗಳಿನಲ್ಲಿ ನಂಜನಗೂಡು ಉಪ ಚುನಾವಣೆ ಬರಲಿದೆ. ಆಗ ರಾಜಕೀಯದ ಬಗ್ಗೆ ಸುದೀರ್ಘವಾಗಿ ಮಾತನಾಡುವೆ. ರೈತರ ಸಾಲವನ್ನು ಕೇಂದ್ರ ಸರ್ಕಾರ ಅರ್ಧ ಮನ್ನಾ ಮಾಡಿದರೆ, ರಾಜ್ಯ ಸರ್ಕಾರವು ಅರ್ಧ ಮನ್ನ ಮಾಡಲಿದೆ. ಇದರ ಬಗ್ಗೆ ಬಿಜೆಪಿ ಸಂಸದರು ಪ್ರಧಾನಿಯವರ ಗಮನಕ್ಕೆ ತರಲಿ ಎಂದರು.