ಮೈಸೂರು: ಹಿರಿಯ ರಾಜಕಾರಣಿ ಶ್ರೀನಿವಾಸಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಬಳಿಕ ನಡೆಯುತ್ತಿರುವ ವಿದ್ಯಮಾನಗಳು ನಂಜನಗೂಡು ಕ್ಷೇತ್ರದ ಜನತೆಗೆ ಅಚ್ಚರಿಯನ್ನುಂಟು ಮಾಡುತ್ತಿದೆ.
ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಗೆ ಗುಡ್ಬೈ ಹೇಳಿರುವ ಶ್ರೀನಿವಾಸಪ್ರಸಾದ್ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಹೀಗಿರುವಾಗ ಅವರ ಪ್ರಾಬಲ್ಯವನ್ನು ಕುಗ್ಗಿಸಿ ಅಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸದಿದ್ದರೆ ಮುಖಭಂಗ ಖಂಡಿತಾ. ಹೀಗಾಗಿಯೇ ಶತಾಯಗತಾಯ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕಾಗಿರುವುದರಿಂದ ಇಡೀ ಆಡಳಿತ ಯಂತ್ರವನ್ನು ತಂದು ನಂಜನಗೂಡಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಲೇ ಇದೆ.
ಶ್ರೀನಿವಾಸಪ್ರಸಾದ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ತಮ್ಮ ತಾಕತ್ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದರಾದರೂ ಅದಕ್ಕೆ ಶ್ರೀನಿವಾಸ ಪ್ರಸಾದ್ ತಮ್ಮ ಬೆಂಬಲಿಗರ ಸಮಾವೇಶ ನಡೆಸಿ ತಕ್ಕ ಉತ್ತರ ನೀಡಿದರು. ಇದರಿಂದ ಸ್ವಲ್ಪ ಮಟ್ಟಿಗೆ ಕಸಿವಿಸಿಗೊಂಡಿರುವ ಸಿಎಂ ಸಾಲಯೋಜನೆ, ಅಭಿವೃದ್ಧಿಯೋಜನೆಗಳನ್ನೆಲ್ಲ ನಂಜನಗೂಡಿನಲ್ಲಿ ಮಾಡುತ್ತಾ ಅದರ ಉದ್ಘಾಟನೆಗಾಗಿ ಬರುತ್ತಿರುವುದನ್ನು ಗಮನಿಸಿದರೆ ಇದು ಶ್ರೀನಿವಾಸಪ್ರಸಾದ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಪ್ರತಿಷ್ಠೆಯ ಯುದ್ಧವಾಗಿ ಬಿಂಬಿತವಾಗುತ್ತಿದೆ.
ಕಳೆದ ಕೆಲವು ಸಮಯಗಳಿಂದ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಂಸದ ಧ್ರುವನಾರಾಯಣ್ ಅವರು ನಂಜನಗೂಡಲ್ಲಿ ಬೀಡು ಬಿಟ್ಟಿದ್ದು, ಹಳ್ಳಿಗಳಿಗೆ ತೆರಳಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವುದರಲ್ಲಿ, ಸಣ್ಣಪುಟ್ಟ ನಾಯಕರನ್ನು ತಮ್ಮ ಪಕ್ಷಕ್ಕೆ ಹಾರ ಹಾಕಿ ಸೇರ್ಪಡೆಗೊಳಿಸುವುದಲ್ಲಿ ತಲ್ಲೀನರಾಗಿದ್ದಾರೆ.
ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ಕೂಡ ನಂಜಗೂಡು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು ಜನರನ್ನು ಭೇಟಿ ಮಾಡಿ ನಾಗರಿಕರ ಕುಂದು ಕೊರತೆಯನ್ನು ಆಲಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಾ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವ ಭರವಸೆಗಳನ್ನು ನೀಡುತ್ತಿದ್ದಾರೆ.
ಎಲ್ಲವನ್ನು ಗಮನಿಸಿದರೆ ರಾಜ್ಯದ ಯಾವ ಕ್ಷೇತ್ರದ ಬಗ್ಗೆಯೂ ಇಷ್ಟೊಂದು ತಲೆಕೆಡಿಸಿಕೊಳ್ಳದ ಸರ್ಕಾರ ನಂಜನಗೂಡಿನ ಬಗ್ಗೆ ಕಾಳಜಿ ವಹಿಸುತ್ತಿರುವುದು ಮುಂದಿನ ಉಪ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಅವರನ್ನು ಮಣಿಸಲು ಎಂಬುದು ಅರ್ಥವಾಗಿ ಬಿಡುತ್ತದೆ.
ಇಲ್ಲಿ ತನಕ ಶ್ರೀನಿವಾಸಪ್ರಸಾದ್ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದರ ಬಗ್ಗೆ ಗೊಂದಲವಿತ್ತು. ಇದೀಗ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿರುವುದಲ್ಲದೆ, ಅವರೇ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಕಾಂಗ್ರೆಸ್ ನಾಯಕರನ್ನು ನಿದ್ದೆಗೆಡಿಸುವಂತೆ ಮಾಡಿದೆ. ಶ್ರೀನಿವಾಸಪ್ರಸಾದ್ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಕಾಂಗ್ರೆಸ್ನಲ್ಲಿ ಮುಂದುವರೆದಿದೆ. ರಾಜಕೀಯ ಲೆಕ್ಕಾಚಾರದ ಪ್ರಕಾರ ದಲಿತರು ಮತ್ತು ವೀರಶೈವ ಮತಗಳು ನಂಜನಗೂಡು ಕ್ಷೇತ್ರದಲ್ಲಿ ಹೆಚ್ಚಾಗಿರುವುದರಿಂದ ಬಿಜೆಪಿ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಉರುಳಿಸುವ ಯತ್ನದಲ್ಲಿದೆ.
ಆದರೆ ನಂಜನಗೂಡಿನ ಸ್ಥಳೀಯ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆಯಿದೆ. ಜತೆಗೆ ದಿವಂಗತ ಎಂ.ಮಹದೇವು ಬೆಂಬಲಿಗರು ಶ್ರೀನಿವಾಸಪ್ರಸಾದ್ ಅವರ ನಾಯಕತ್ವವನ್ನು ಒಪ್ಪಿಕೊಂಡು ಬೆಂಬಲಿಸುತ್ತಾರಾ ಎಂಬ ಬಗ್ಗೆ ಅನುಮಾನವಿದೆ.
ಸದ್ಯ ರಾಜ್ಯ ರಾಜಕೀಯದಲ್ಲಿ ನಂಜನಗೂಡು ಗಮನಸೆಳೆಯುತ್ತಿದ್ದು, ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಎನ್ನುವುದಕ್ಕಿಂತ ಶ್ರೀನಿವಾಸಪ್ರಸಾದ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತಿದೆ. ರಾಜಕೀಯ ನಾಯಕರ ನಾಟಕಗಳನ್ನು ವೀಕ್ಷಿಸುತ್ತಿರುವ ಮತದಾರರ ಏನು ತೀರ್ಮಾನ ಕೈಗೊಳ್ಳುತ್ತಾನೆ ಎಂಬುದರ ಮೇಲೆ ಎಲ್ಲವೂ ನಿಧರ್ಾರವಾಗಲಿದೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ.