ಮೈಸೂರು: ಜಲದರ್ಶಿನಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್.ವಿಶ್ವನಾಥ ಮಾತನಾಡಿ, ಮೊದಮೊದಲು ನೋಟ್ ನಿಷೇಧವನ್ನು ನಾವು ಸಹ ಬೆಂಬಲಿಸಿದ್ದೆವು. ಅದನ್ನೇ ಒಂದು ಕ್ರಾಂತಿ ಎನ್ನೋ ರೀತಿಯಲ್ಲಿ ಬಿಂಬಿಸಲಾಗಿತ್ತು. ಮೋದಿ ನೋಟ್ ಬ್ಯಾನ್ ಮಾಡುವ ಮೂಲಕ ದೊಡ್ಡ ಅಪಚಾರ ವೆಸಗಿದ್ದಾರೆ. ಸ್ವಿಸ್ ಬ್ಯಾಂಕಿನಿಂದ ಹಣ ತಂದು ಎಲ್ಲರ ಅಕೌಂಟ್ ಗೆ 15 ಲಕ್ಷ ಹಾಕುವುದಾಗಿ ತಿಳಿಸಿದ್ದರು. 60 ಲಕ್ಷ ಅಕೌಂಟ್ ಚೆಕ್ ಮಾಡೋದಕ್ಕೇ ಸುಮಾರು 2 ವರ್ಷ ಬೇಕಾಗಬಹುದು ಎಂದು ಟೀಕಿಸಿದರು.
ಕಾರ್ಡ್ ಸ್ವೈಪ್ ಮಾಡಿದರೆ 2 ಪರ್ಸೆಂಟ್ ಹಣ ಕಟ್ ಆಗಲಿದೆ. ಇದು 2018ರ ಚುನಾವಣೆಗೆ ಹಣ ಸಂಗ್ರಹಕ್ಕಾಗಿ ಮಾಡಿಕೊಂಡಿರೋ ದಾರಿಯಾಗಿದೆ. ಪೇಟಿಎಂ ಮಾಡಿರೋ ವ್ಯಕ್ತಿ ಮೋದಿಯವರಿಗೆ ಆಪ್ತ. ಚುನಾವಣಾ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ್ದಾನೆ. ಅದಕ್ಕಾಗಿ ಈಗ ಮೋದಿ ಅವನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಫೂನ್ ಮಾಡಲು ಮುಂದಾದ ಮೋದಿ ತಾನೇ ಸ್ವತಃ ರಾಬಿನ್ ಹುಡ್ ತರ ಆಡುತ್ತಿದ್ದಾರೆ ಎಂದರು.
ಡಿಸೆಂಬರ್ 31ರಂದು ಮತ್ತೇನೋ ಘೋಷಣೆ ಮಾಡುತ್ತಾರಂತೆ ಅದೇನು ಅಂತ ಕೇಳೋದಿಕ್ಕೆ ನಾನೂ ಕುತೂಹಲನಾಗಿದ್ದೇನೆ. ಮೋದಿ ತನ್ನ ಮಾತಿನ ಮೂಲಕವೇ ಜನರನ್ನು ಗೊಂಬೆ ತರಹ ಕುಣಿಸುತ್ತಿದ್ದಾರೆ. ನೋಟ್ ಬ್ಯಾನ್ ಮಾನವ ಹಕ್ಕುಗಳ ಮೇಲಾದ ದಮನ ನೀತಿ. ಇದನ್ನು ದೇಶ-ವಿದೇಶಗಳ ತಂತ್ರಜ್ಞರೇ ಒಪ್ಪಿಕೊಂಡಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸಹ ನೋಟು ಬ್ಯಾನ್ ವಿರುದ್ದ ಹೋರಾಟ ಮಾಡುವುದರಲ್ಲಿ ವಿಫಲವಾಗಿದೆ ಎಂದರು.
ಮಂಗಳೂರಿನಲ್ಲಿ ಪೂಜಾರಿ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ರಾಜ್ಯ ಕಾಂಗ್ರೆಸ್ ನಲ್ಲಿ ನಾನು ಮತ್ತು ಪೂಜಾರಿ ಅಶೋಕವನದ ಸೀತೆ ಇದ್ದಹಾಗೇ. ಸೀತೆ ರಾಮನನ್ನು ಬಿಟ್ಟು ಇನ್ಯಾರನ್ನೂ ನೆನೆಯಲಿಲ್ಲ. ಹಾಗೇ ನಾವು ಕೂಡ ಕಾಂಗ್ರೆಸ್ ಬಿಟ್ಟು ಬೇರೆ ನೆನೆಯುವುದಿಲ್ಲ. ಇದನ್ನು ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಿರಿಯರ ಮಾತಿಗೆ ಪಕ್ಷದಲ್ಲಿ ಮನ್ನಣೆ ಸಿಗಬೇಕು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ವಿಜಯಕುಮಾರ್, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.