ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮಗ್ಗೆ ಮತ್ತು ಮಳಲಿ ಗ್ರಾಮಗಳಲ್ಲಿ ಭಯ ಹುಟ್ಟಿಸಿರುವ ಹುಲಿಯ ಪತ್ತೆಗೆ ಕಳೆದ ನಾಲ್ಕೈದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿಯ ಜಾಡು ಪತ್ತೆಯಾಗದ ಕಾರಣ ಹುಲಿ ಅರಣ್ಯ ಸೇರಿರಬಹುದೆಂಬ ನಿರ್ಧಾರಕ್ಕೆ ಅರಣ್ಯ ಇಲಾಖೆ ಬಂದಿದೆಯಾದರೂ ಕಾರ್ಯಾಚರಣೆ ನಿಲ್ಲಿಸಿಲ್ಲ.
ಈಗಾಗಲೇ ಈ ವ್ಯಾಪ್ತಿಯಲ್ಲಿ ಸಿಬ್ಬಂದಿಗಳನ್ನು ಪಹರೆಗೆ ನಿಯುಕ್ತಿಗೊಳಿಸಲಾಗಿದ್ದು, ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಗುರುವಾರ ಕಾರ್ಯಾಚರಣೆ ಸಂದರ್ಭ ಒರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೇ ಸುಮಾರು 100ಕ್ಕೂ ಹೆಚ್ಚು ಮಂದಿ ಸಾಕಾನೆಗಳ ಸಹಾಯದೊಂದಿಗೆ ಕಾರ್ಯಾಚರಣೆ ಆರಂಭಿಸಿ ರಾತ್ರಿ ತನಕ ಎಲ್ಲೆಡೆ ಹುಡುಕಾಟ ನಡೆಸಿದರೂ ಹುಲಿಯ ಸುಳಿವು ಪತ್ತೆಯಾಗಿರಲಿಲ್ಲ.
ಜಾನುವಾರುಗಳನ್ನು ತಿಂದು ಹಾಕುತ್ತಿರುವ ಮತ್ತು ಕಾರ್ಯಾಚರಣೆ ಸಂದರ್ಭ ಒಬ್ಬರನ್ನು ಬಲಿಪಡೆದು ಇಬ್ಬರನ್ನು ಗಾಯಾಳುಗಳನ್ನಾಗಿ ಮಾಡಿದ ಮಳಲಿ ಗ್ರಾಮದಲ್ಲಿ ಅಡಗಿ ಕುಳಿತಿದೆ ಎನ್ನಲಾದ ಹುಲಿಯ ಪತ್ತೆಗಾಗಿ ಶುಕ್ರವಾರ ನಡೆಸಿದ ಕಾರ್ಯಾಚರಣೆ ವಿಫಲವಾಗಿದ್ದು, ಹುಲಿಯ ಸುಳಿವು ಪತ್ತೆಯಾಗಿಲ್ಲ. ನಾಗರಹೊಳೆ ಅರಣ್ಯದಿಂದ ನಾಡಿನೊಳಗೆ ಮರಿಯೊಂದಿಗೆ ಬಂದಿರುವ ಹುಲಿ ಕಳೆದ ಇಪ್ಪತ್ತು ದಿನಗಳಿಂದ ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಿ ಜಾನುವಾರಗಳನ್ನು ಬೇಟೆಯಾಡಿ ತಿನ್ನುತ್ತಿದೆ ಎಂದು ಹೇಳಲಾಗಿದೆ. ಈ ಹುಲಿಗೆ ಈಗಾಗಲೇ ನಾಲ್ಕು ಹಸುಗಳು ಬಲಿಯಾಗಿವೆ. ಹುಲಿ ಮರಿಗಳೊಂದಿಗೆ ಇರುವುದನ್ನು ಗ್ರಾಮದ ಕೆಲವರು ನೋಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಇದನ್ನು ದೃಢಪಡಿಸಿದ್ದರಿಂದ ಹುಲಿಯನ್ನು ಅರಣ್ಯಕ್ಕೆ ಅಟ್ಟು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಬಾಳೆತೋಟವೊಂದರಲ್ಲಿ ಹುಲಿ ವಾಸ್ತವ್ಯ ಹೂಡಿರುವ ಬಗ್ಗೆ ಸಂಶಯ ಬಂದ ಹಿನ್ನಲೆಯಲ್ಲಿ ಅಲ್ಲಿ ಪಟಾಕಿ ಹಾಗೂ ಬೆದರು ಗುಂಡು ಹಾರಿಸಿ ಅದನ್ನು ಹೊರಕ್ಕೆ ಓಡಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಕಾರ್ಯಾಚರಣೆ ಆರಂಭವಾದಲ್ಲಿಂದ ಇಲ್ಲಿವರೆಗೆ ಹುಲಿ ಯಾರ ಕಣ್ಣಿಗೂ ಬೀಳದೆ ಇರುವ ಹಿನ್ನಲೆಯಲ್ಲಿ ಅದು ಕಾಡಿಗೆ ತೆರಳಿರಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಶುಕ್ರವಾರ ಬೆಳಗ್ಗಿನಿಂದಲೇ ಸಾಕಾನೆಗಳಾದ ಅಭಿಮನ್ಯು ಮತ್ತು ಕೃಷ್ಣರ ಜೊತೆಗೆ ವೈದ್ಯರಾದ ಉಮಾಶಂಕರ್ ಸೇರಿದಂತೆ 100ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹುಲಿ ಪತ್ತೆಯಾಗದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾವಾಗ ಹುಲಿ ತಮ್ಮ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆಯೋ ಎಂಬ ಗ್ರಾಮಸ್ಥರನ್ನು ಕಾಡುತ್ತಿದೆ. ಹುಲಿಯ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯುವ ತನಕ ಇಲ್ಲಿನ ಜನತೆಗೆ ಆತಂಕ ತಪ್ಪಿದಲ್ಲ.