ಕೆ.ಆರ್.ಪೇಟೆ: ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಹೊಸವರ್ಷದ ಆಚರಣೆಯ ಸಂದರ್ಭ ಜೆಡಿಎಸ್ ಕಾರ್ಯಕರ್ತ ಹರೀಶ್(ಗುಂಡ)ನನ್ನು ಹತ್ಯೆಗೈದ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮುರುಕನಹಳ್ಳಿ ಗ್ರಾಮದ ಗ್ರಾ.ಪಂ.ಮಾಜಿ ಸದಸ್ಯ ಎಂ.ಸಿ.ಕುಮಾರ್ ಅವರ ಪುತ್ರ ರಕ್ಷಿತ್(23) ಹಾಗೂ ಅದೇ ಗ್ರಾಮದ ದಿನಸಿ ವ್ಯಾಪಾರಿ ವೆಂಕಟೇಶ್ ಅವರ ಪುತ್ರ ಯೋಗೇಶ್(28) ಬಂಧಿತ ಹಂತಕರಾಗಿದ್ದಾರೆ. ಇವರು ಡಿ.31ರಂದು ಸುಮಾರು 12ಗಂಟೆ ಸಮಯದಲ್ಲಿ ಮುರುಕನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಿಂದ ತಮ್ಮ ಮನೆಯ ಕಡೆ ಹೊರಟಿದ್ದ ಹರೀಶ್ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಮುರುಕನಹಳ್ಳಿ ಗ್ರಾಮದ ರಾಜೇಗೌಡ ಅವರ ಪುತ್ರ ಹರೀಶ್(ಗುಂಡ) ಅವರ ಹತ್ಯೆಯಾದ ನಂತರ ಗ್ರಾಮದಲ್ಲಿ ಸ್ಮಶಾನ ಮೌನ ಮುಂದುವರೆದಿದ್ದು ಬಹುತೇಕ ಮನೆಗಳು ಬಾಗಿಲು ಬಂದ್ ಮಾಡಿಕೊಂಡ ಸ್ಥಿತಿಯಲ್ಲಿವೆ. ಈ ನಡುವೆ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಹರೀಶ್ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸಂಸದ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ಕೆ.ಸಿ.ನಾರಾಯಣಗೌಡ ಹಾಗೂ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್ ಅವರುಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಪ್ರಕರಣದ ಗಂಭೀರತೆ ಅರಿತು ಗ್ರಾಮದಲ್ಲಿ ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ಮಾಡಿದ್ದಲ್ಲದೆ ಜಿಲ್ಲಾ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಪ್ರಭಾಕರ್ ನೇತೃತ್ವದಲ್ಲಿ ನಾಲ್ಕು ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿತ್ತು. ಆರೋಪಿಗಳ ಸ್ನೇಹಿತರು ಮತ್ತು ಸಂಬಂಧಿಕರ ಮೊಬೈಲ್ ಕರೆಗಳನ್ನು ಆಧರಿಸಿ ಹೊರ ಜಿಲ್ಲೆಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ರಕ್ಷಿತ್ ಮತ್ತು ಯೋಗೇಶ್ ಅವರನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸುವಲ್ಲಿ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳ ತಂಡವು ಯಶಸ್ವಿಯಾಗಿದೆ.
ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ಇವರು ರಾಜಕೀಯ ದ್ವೇಷಕ್ಕೆ ಕೊಲೆ ಮಾಡಿದ್ದಾರೆಯೋ ಅಥವಾ ವೈಯಕ್ತಿಕ ದ್ವೇಷವೇನಾದರೂ ಇದೆಯಾ? ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ತನಿಖೆ ಸಂಪೂರ್ಣ ತನಿಖೆ ಬಳಿಕವಷ್ಟೆ ಕೊಲೆಗೆ ಕಾರಣಗಳು ತಿಳಿದು ಬರಬೇಕಿದೆ.