ಮೈಸೂರು: ಹುಣಸೂರು ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪರಮೇಶ್(31) ಎಂಬುವರು ಮೈಸೂರಿನ ಗೌರಿಶಂಕರ ಬಡಾವಣೆಯ ಪಾಳು ಜಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ನಂಜನಗೂಡು ರಸ್ತೆಯ ಅಡಕನಹಳ್ಳಿಯಲ್ಲಿ ಏರ್ಪಾಟಾಗಿದ್ದ ರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಮಂಗಳವಾರ ಕರ್ತವ್ಯ ಮುಗಿಸಿ ಹಿಂತಿರುಗಿದ್ದರು. ಆದರೆ ಮನೆಗೆ ತೆರಳಿರಲಿಲ್ಲ. ರಾತ್ರಿ ಮನೆಗೆ ಬಾರದ್ದರಿಂದ ಮನೆಯವರು ಭಯಭೀತರಾಗಿದ್ದರು. ಬುಧವಾರ ಬೆಳಿಗ್ಗೆ ಗೌರಿಶಂಕರ ನಗರದ ಖಾಲಿ ಜಾಗದಲ್ಲಿ ಪರಮೇಶ್ ಅವರ ಮೃತದೇಹ ದೊರೆತಿದೆ.
ಪೇದೆ ಪರಮೇಶ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಕೆಲವರು ಸಾಲಬಾಧೆಯಿಂದ ಬಳಲುತ್ತಿದ್ದರು ಎಂದು ಹೇಳುತ್ತಿದ್ದರಾದರೂ ಅದನ್ನು ನಂಬಲು ಸಾಧ್ಯವಿಲ್ಲ. ಈ ನಡುವೆ ವಾರದ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಮನೆಗೆ ತೆರಳಿದ್ದರು. ಅದಕ್ಕೆ ಮೇಲಾಧಿಕಾರಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಕೆ.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.