ಗುಂಡ್ಲುಪೇಟೆ: ಅಧಿಕಾರದಲ್ಲಿದ್ದಾಗಲೇ ಅಕಾಲಿಕ ಮರಣಕ್ಕೀಡಾದ ಗುಂಡ್ಲುಪೇಟೆ ಕ್ಷೇತ್ರದ ಶಾಸಕ, ಚಾಮರಾಜನಗರ ಉಸ್ತುವಾರಿ ಸಚಿವರಾಗಿದ್ದ ಹೆಚ್.ಎಸ್.ಮಹದೇವ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಗಣ್ಯರು, ಅಪಾರ ಜನಸಾಗರದ ನಡುವೆ ನೆರವೇರಿತು.
ಮೈಸೂರಿನಿಂದ ಪಾರ್ಥಿವ ಶರೀರವನ್ನು ಮಂಗಳವಾರ ಹಿರಾಕಾಟಿ ಬೇಗೂರು ಗರಗನಹಳ್ಳಿ ಮಾರ್ಗವಾಗಿ ಗುಂಡ್ಲುಪೇಟೆ ತಂದು ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ರಾತ್ರಿ 8.30ಕ್ಕೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಪಾರ್ಥಿವ ಶರೀರ ಆಗಮಿಸುತ್ತಿದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ತಾಲೂಕಿನ ವಿವಿಧ ಗ್ರಾಮಗಳ ಮುಂದೆ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು ಜನರು ಮುಗಿ ಬಿದ್ದರು. 9 ಘಂಟೆಗೆ ತವರು ಹೋಬಳಿ ಕೇಂದ್ರ ಬೇಗೂರು ಗ್ರಾಮಕ್ಕೆ ಆಗಮಿಸಿತು. ನಂತರ ರಾಘವಾಪುರ ಮಾರ್ಗವಾಗಿ ಪಟ್ಟಣಕ್ಕೆ ಸಾಗಿ 9.50ಕ್ಕೆ ತಲುಪಿತು.
ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ತಮ್ಮ ನಾಯಕರ ಅಂತಿಮ ದರ್ಶನ ಪಡೆಯಲು ಹರಸಾಹಸಪಟ್ಟರು. ನಂತರ ಬೇಗೂರು ಮಾರ್ಗವಾಗಿ ಮಧ್ಯರಾತ್ರಿ 11.50 ಕ್ಕೆ ಸ್ವಗ್ರಾಮ ಹಾಲಹಳ್ಳಿ ಗ್ರಾಮಕ್ಕೆ ತರಲಾಗಿತ್ತು.
ಬುಧವಾರ ವೀರಶೈವ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು. ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನ 2:30 ರವರೆಗೆ ಇಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಂತಿಮ ದರ್ಶನ ಮತ್ತು ನಮನ ಸಲ್ಲಿಸಿದರು. ನಂತರ ಬೊಗ್ಗನಪುರ ಫಾರಂಹೌಸ್ ನಲ್ಲಿ ವೀರಶೈವ ಸಮುದಾಯದ ವಿಧಿ ವಿಧಾನದಂತೆ ಕ್ರೀಯಾ ಸಮಾಧಿ ನಿರ್ಮಿಸಲಾಗಿತ್ತು. ಆ ಸ್ಥಳದಲ್ಲಿ ಸುತ್ತೂರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಮಾದಾಪಟ್ಟಣದ ಸದಾಶಿವಸ್ವಾಮಿ ಮತ್ತು ವಾಟಾಳು ಮಠದ ಶ್ರೀಗಳು ಮತ್ತು ವಿವಿಧ ಮಠಾಧಿಪತಿಗಳ ಆಶೀರ್ವಾದದೊಡನೆ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ಮೃತರ ಪುತ್ರ ಗಣೇಶ್ ಪ್ರಸಾದ್ ನೆರವೇರಿಸಿದರು.
ಇದಕ್ಕೂ ಮುನ್ನ ಸಕಲ ಸರ್ಕಾರಿ ಗೌರವವನ್ನು ಅರ್ಪಿಸಿ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಗೌರವ ಅರ್ಪಿಸಲಾಯಿತು.
ಸಚಿವರ ಅಂತಿಮ ವಿಧಿವಿಧಾನದ ಜವಾಬ್ದಾರಿಯನ್ನು ರಾಜ್ಯ ಪೋಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಜಿಲ್ಲಾಧಿಕಾರಿಗಳಾದ ಬಿ.ರಾಮು ಮತ್ತು ಅಪರ ಜಿಲ್ಲಾಧಿಕಾರಿ ಭಾರತಿ, ಉಪವಿಭಾಗಾಧಿಕಾರಿ ನಳಿನ್ಅತುಲ್, ಐಜಿ ವಿಫುಲ್ಕುಮಾರ್, ಅಡಿಷನಲ್ ಎಸ್ಪಿ ಮುತ್ತುರಾಜ್ ಗೌಡ, ಡಿವೈಎಸ್ಪಿ ಗಂಗಾಧರಸ್ವಾಮಿ, ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ, ಪಿಎಸ್ಐ ಸಂದೀಪ್ ಕುಮಾರ್, ತಹಸಿಲ್ದಾರ್ ಕೆ.ಸಿದ್ದು ವಹಿಸಿದ್ದರು.