ಮೈಸೂರು: ಸರ್ಕಾರ ಬಡವರಿಗೆ ಪಡಿತರವನ್ನು ವಿತರಿಸಬೇಕಲ್ಲ ಎಂಬ ಕಾರಣಕ್ಕೋ ಅಥವಾ ಏನು ಕೊಟ್ಟರೂ ಬಡವರು ತಿನ್ನುತ್ತಾರೆ ಎಂಬ ಮನೋಭಾವದಿಂದಲೋ ಏನೇ ಜನವರಿ ತಿಂಗಳಲ್ಲಿ ಪಡಿತರ ವಿತರಣೆ ಮಾಡುವ ಚೀಲಗಳಲ್ಲಿ ಕಲ್ಲು ಮಿಶ್ರಿತ ಕಳಪೆ ಗುಣಮಟ್ಟದ ರಾಗಿಯನ್ನು ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ.
ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ವಿತರಣೆಯಾಗುತ್ತಿರುವ ಪಡಿತರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದು ಶಾಸಕ ಸಾ.ರಾ.ಮಹೇಶ್ ಅವರ ಗಮನಕ್ಕೂ ಬಂದಿತ್ತು. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುವ ಶಾಸಕರು ಈ ಬಗ್ಗೆ ಸಾರ್ವಜನಿಕರು ನೀಡುತ್ತಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ರಿಯಾಲಿಟಿ ಚೆಕ್ ಮಾಡಲು ಮುಂದಾಗಿ ಬಿಟ್ಟರು.
ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡದೆ ಪಡಿತರದಾರರಿಗೆ ವಿತರಿಸಲು ಸಂಗ್ರಹಿಸಿದ್ದ ಕೆ.ಆರ್.ನಗರದ ಕೆಎಫ್ಸಿಎಸ್ಸಿ ಮತ್ತು ಟಿಎಪಿಸಿಎಂಎಸ್ ಉಗ್ರಾಣಕ್ಕೆ ಭೇಟಿ ನೀಡಿದ ಅವರು ಚೀಲಗಳಲ್ಲಿ ತುಂಬಿಟ್ಟಿದ್ದ ರಾಗಿಯನ್ನು ಪರಿಶೀಲಿಸಿದರು. ಆಗ ಅಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲು ಮಿಶ್ರಿತ ರಾಗಿಯನ್ನು ಕಂಡು ಬೆಚ್ಚಿ ಬಿದ್ದಿದ್ದರು. ಇದನ್ನು ಜನ ತಿನ್ನಬೇಕೇನ್ರಿ ಪ್ರಶ್ನಿಸಿದ ಅವರು ರಾಗಿ ಕಳಪೆಯಾಗಿದ್ದರೂ ಇದನ್ನೇ ವಿತರಣೆ ಮಾಡಲು ಮುಂದಾಗಿದ್ದೇಕೆ ಎಂದು ಆಹಾರ ಶಿರಸ್ತೇದಾರ್ ಹನುಮಂತೇಗೌಡ ಮತ್ತು ಕೆಎಫ್ಸಿಎಸ್ಸಿ ವ್ಯವಸ್ಥಾಪಕ ಜಯರಾಮ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಚೀಲದಲ್ಲಿದ್ದ ರಾಗಿಯಲ್ಲಿ ಕಲ್ಲು ಮತ್ತು ಧೂಳು ಮಿಶ್ರಿತವಾಗಿರುವುದನ್ನು ಅಧಿಕಾರಿಗಳಿಗೆ ತೋರಿಸಿ ತಾಲೂಕಿನ ಪಡಿತದಾರರಿಗೆ ಇಂತಹ ಕಳಪೆ ರಾಗಿಯನ್ನು ಸರಬರಾಜು ಮಾಡಿ ಅವರನ್ನು ರೋಗಗ್ರಸ್ಥರನ್ನಾಗಿಸಲು ಯೋಚಿಸಿದ್ದೀರಾ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೆ, ಕೂಡಲೇ ಕಲ್ಲು ಮಿಶ್ರಿತ ರಾಗಿಯನ್ನು ಸರಬರಾಜು ಮಾಡುವುದನ್ನು ನಿಲ್ಲಿಸಿ ಎಂದರು.
ಆದರೆ ಪರಿಸ್ಥಿತಿಯನ್ನು ವಿವರಿಸಿದ ಅಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಂಡರಲ್ಲದೆ, ಕಳಪೆ ಎಂಬ ಕಾರಣಕ್ಕೆ ತಾಲೂಕಿನಾದ್ಯಂತ ಪಡಿತದಾರರಿಗೆ ಸರಬರಾಜು ಮಾಡದೆ ಹೋದರೆ ಮುಂದಾಗುವ ಅನಾಹುತಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟರು. ಅಧಿಕಾರಿಗಳ ಅಸಹಾಯಕತೆ, ಮುಂದೆ ಎದುರಿಸಬೇಕಾದ ಪರಿಸ್ಥಿತಿಯನ್ನು ಅರಿತ ಶಾಸಕರು ಮುಂದಿನ ತಿಂಗಳಿನಿಂದ ಇಂತಹ ಕಳಪೆ ಗುಣಮಟ್ಟದ ರಾಗಿ ಸರಬರಾಜಾದರೆ ಶುದ್ದಗೊಳಿಸಿ ನಂತರ ಪಡಿತದಾರರಿಗೆ ಸರಬರಾಜು ಮಾಡಿ ಎಂದು ಸೂಚಿಸಿ ಹೊರಟರು