ಮೈಸೂರು: ಹಣ ಮತ್ತು ರಾಜಕೀಯ ಶಕ್ತಿ ಬಳಸಿ ನನಗೆ ಕಿರುಕುಳ ನೀಡುತ್ತಿದ್ದು, ಇದರ ವಿರುದ್ದ ಹೋರಾಡಲು ನಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂದು ಪ್ರೇಮ ಕುಮಾರಿ ಮಾಜಿ ಸಚಿವ ಎಸ್.ಎ ರಾಮದಾಸ್ ಗೆ ಸವಾಲು ಹಾಕಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಪ್ರೇಮಕುಮಾರಿ, ಮಾಜಿ ಸಚಿವ ರಾಮದಾಸ್ ಅವರು ಹಾಲಿ ಇರುವ ಪ್ರಕರಣಗಳ ಸಾಕ್ಷಿ ನಾಶಪಡಿಸಿ ತಾನು ದೋಷಮುಕ್ತನೆಂದು ಬೀಗುತ್ತಿದ್ದು, ಸಾರ್ವಜನಿಕವಾಗಿ ಸಕ್ರಿಯರಾಗಿ ನಾನೇ ಪ್ರಕರಣವನ್ನ ಗೆದ್ದಿರುವುದಾಗಿ ಬೀಗುತ್ತಿದ್ದಾರೆ. ಇದರಿಂದ ಸಾರ್ವಜನಿಕವಾಗಿ ನಾನು ಓಡಾಡಲು ಕಷ್ಟವಾಗುತ್ತಿದ್ದು, ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದರು.
ಅಲ್ಲದೆ ಸರ್ಕಾರದಿಂದಲೇ ತನಿಖಾ ವರದಿ ಹಾಗೂ ದಾಖಲೆಗಳು ಸೋರಿಕೆಯಾಗಿದ್ದು, ವಿರೋಧ ಪಕ್ಷದ ಸರ್ಕಾರವಿದ್ದರೂ ತಮ್ಮ ಪ್ರಭಾವ ಬೀರಿ ದಾಖಲೆ ನಾಶ ಪಡಿಸುತ್ತಿದ್ದಾರೆ. ನನಗೆ ರಾಜಕೀಯ ಮತ್ತು ಸಿನಿಮಾರಂಗದಲ್ಲಿ ಬಂದ ಅವಕಾಶಗಳನ್ನು ಪಿತೂರಿ ಮಾಡಿ ತಪ್ಪಿಸಿ ಭವಿಷ್ಯವನ್ನು ಹಾಳುಗೆಡವಿದ್ದಾರೆ. ತಮ್ಮ ರಾಜಕೀಯ ಬೆಳವಣಿಗಾಗಿ ರಾಮದಾಸ್ ಅವರು ನಾನು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನೂ ಒತ್ತಾಯಪೂರ್ವಕವಾಗಿ ಮುಚ್ಚಿಹಾಕಿದ್ದಾರೆ. ಸುಳ್ಳು ಹೇಳಿ ಅದನ್ನೇ ಸತ್ಯವೆಂದು ಪ್ರತಿಪಾದಿಸುವುದೇ ಅವರ ಪಕ್ಷದ ಅಜೆಂಡಾವಾಗಿದೆ. ಈ ಬಗ್ಗೆ ಪಕ್ಷದ ಮುಖಂಡರಾದ ಯಡಿಯೂರಪ್ಪ ಹಾಗೂ ಇತರರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದರೂ ಅವರು ಕೂಡ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ಪ್ರವೇಶ:
ಇನ್ನು ಮುಂದೆ ಸಾಮಾಜಿಕ ಹೋರಾಟ ಮಾಡುವುದಾಗಿ ತಿಳಿಸಿದ ಪ್ರೇಮಾಕುಮಾರಿ, ಇದಕ್ಕಾಗಿ ರಾಜಕೀಯ ಪ್ರವೇಶಿಸುತ್ತೇನೆ. ಯಾವ ಪಕ್ಷವೆಂದು ಇನ್ನೂ ನಿರ್ಧಾರವಾಗಿಲ್ಲ, ಯಾವುದೇ ಪಕ್ಷ ಸರಿಹೊಂದದಿದ್ದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದರು.