ಮೈಸೂರು: ಪತಿ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತವರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯನಗರ ನಿವಾಸಿ ಎಸ್.ಬಿ.ಐ ಬ್ಯಾಂಕ್ ನಲ್ಲಿ ವ್ಯವಸ್ಥಾಪಕರಾಗಿದ್ದ ಡಿ.ಮರಿಸ್ವಾಮಿನಾಯಕ್ ಅವರ ಪುತ್ರಿ ಅಂಜಲಿ(23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಯ ಮದುವೆ ನಾಲ್ಕು ವರ್ಷಗಳ ಹಿಂದೆ ತಿಲಕ್ ನಗರದ ನಿವಾಸಿ ಶಶಿಕಲಾ ಮತ್ತು ನಾಗರಾಜ್ ಅವರ ಪುತ್ರ ಅನಿಲ್ ನೊಂದಿಗೆ ನಡೆದಿತ್ತು.
ಆದರೆ ಅನಿಲ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎಂದು ಹೇಳಲಾಗಿದ್ದು ಈ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹೆಂಡತಿ ತನ್ನನ್ನು ಪ್ರಶ್ನಿಸುತ್ತಿದ್ದರಿಂದ ಕೋಪಗೊಂಡ ಆತ ವರದಕ್ಷಿಣೆಯ ಕಿರುಕುಳ ನೀಡತೊಡಗಿದ್ದನು. ಇದಕ್ಕೆ ಆತನ ಮನೆಯವರು ಸಾಥ್ ನೀಡಿದ್ದರು.
ಇದರಿಂದ ಬೇಸತ್ತ ಅಂಜಲಿ ತವರಿಗೆ ಬಂದಿದ್ದು, ಜ.1ರಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಈ ಸಂದರ್ಭ ವಿಷಯ ತಿಳಿದ ಮನೆಯವರು ಕಾಪಾಡಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಪತಿ ಅನಿಲ್, ಅತ್ತೆ ಶಶಿಕಲಾ ಮಾವ ನಾಗರಾಜ್, ಮೈದುನ ಅಜಯ್, ಸೋದರ ಮಾವ ಚಂದ್ರಶೇಖರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.