ಕೆ.ಆರ್.ನಗರ: ಇದೀಗ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿರುವುದರಿಂದ ಮತ್ತೆ ಅಧಿಕಾರಕ್ಕೆ ಬರದೇ ಇರುವುದು ಎಷ್ಟು ಸತ್ಯವೋ ಮತ್ತೆ ಜೆಡಿಎಸ್ ಪಕ್ಷವು ಮರಳಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಚುಂಚನಕಟ್ಟೆ ರಥೋತ್ಸವದಲ್ಲಿ ಪತ್ನಿಭವಾನಿ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರೊಂದಿಗೆ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನತೆಗೆ ರಾಷ್ಟ್ರೀಯ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದು ಈ ಪಕ್ಷಗಳನ್ನು ಅಧಿಕಾರದಿಂದ ದೂರವಿಡುವ ಕಾಲ ಹತ್ತಿರವಾಗುತ್ತಿದೆ ಎಂದರು.
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳ ಸ್ಥಿತಿ ಅದೋಗತಿಗೆ ಇಳಿಯಲಿದ್ದು ಈ ಚುನಾವಣೆ ವೇಳೆಗೆ ಇವೆರಡು ಪಕ್ಷಗಳ ಅನೇಕ ಶಾಸಕರು ಮತ್ತು ಮುಖಂಡರುಗಳು ತಮ್ಮ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಅಧಿಕಾರಕ್ಕೆ ಬಂದ ಮೊದಲ ದಿವಸದಲ್ಲಿಯೇ ರೈತರ ಹಿತದೃಷ್ಠಿಯನ್ನು ಇಟ್ಟುಕೊಂಡು ಸಂಪೂರ್ಣವಾಗಿ ಅವರ ಸಾಲವನ್ನು ಮನ್ನಾ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಾನಂತೂ ಚುನಾವಣೆಗೆ ಸಿದ್ದನಿದ್ದೇನೆ. ದೇವೇಗೌಡರ ಮಾರ್ಗದರ್ಶನದಂತೆ ಮುಂದಿನ ವಿಧಾನಸಭೆ ಇಲ್ಲವೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಾಸನ ಜಿಲ್ಲಾ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಖಚಿತಪಡಿಸಿದರು.
ಚುಂಚನಕಟ್ಟೆ ಶ್ರೀರಾಮದೇವರ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಅದನ್ನು ಈಗಲೇ ಹೇಳಲಾರೆ ಎಂದು ನುಣುಚಿಕೊಂಡರು.
120 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಮುಂದಿನ ವಾರ 120 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾಜಿ ಪ್ರಧಾನಿ ಹೆೆಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಮಾಡಲಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡವರು ಸೇರಿದಂತೆ ಒಟ್ಟು 120 ಮಂದಿ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಈಗಿನಿಂದಲೇ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಿಸುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಮೊದಲೇ ಅಂದುಕೊಂಡಿರುವಂತೆ ಕನಿಷ್ಟ 120 ಸ್ಥಾನ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದೇವೆ ಎಂದು ಹೇಳಿದರು. ಏನದು ಪ್ಲಾನ್ ಎಂದರೆ ಇದು ರಹಸ್ಯ ಎಂದು ಅಚ್ಚರಿ ತಂದರು.