ಮೈಸೂರು: ಜನವರಿ 11 ರಂದು ಕೆಲಸಕ್ಕೆಂದು ತೆರಳಿದವನು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, ಕೊಲೆಯಿರಬಹುದೆನ್ನುವ ಅನುಮಾನ ವ್ಯಕ್ತವಾಗತೊಡಗಿದೆ.
ಮೈಸೂರಿನ ಶಾಂತಿನಗರ ನಿವಾಸಿ ಸಯ್ಯದ್ ಸಾಧಿಕ್(22) ಎಂಬಾತನೆ ಶವವಾಗಿ ಪತ್ತೆಯಾದ ವ್ಯಕ್ತಿ. ಈತ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಕೆ.ಆರ್.ಪೇಟೆಗೆ ನಿತ್ಯವೂ ಕೆಲಸಕ್ಕೆ ಹೋಗುತ್ತಿದ್ದ. ಜನವರಿ 10ಕ್ಕೆ ಕೆಲಕ್ಕೆ ತೆರಳಿದವನು ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಜನವರಿ 11ರಂದು ಈತ ನಾಪತ್ತೆಯಾದ ಕುರಿತು ಉದಯಗಿರಿಠಾಣೆಯಲ್ಲಿ ಮನೆಯವರು ದೂರು ದಾಖಲಿಸಿದ್ದರು.
ಜನವರಿ 13ಕ್ಕೆ ಶ್ರೀರಂಗಪಟ್ಟಣ ಬಳಿ ಇರುವ ಪಶ್ಚಿಮವಾಹಿನಿಯ ಸಮೀಪದ ಚಂದ್ರವನದ ಬಳಿ ಶವವೊಂದು ಪತ್ತೆಯಾಗಿತ್ತು. ಅದನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಈ ಕುರಿತು ಶ್ರೀರಂಗಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಆ ಶವ ಸಯ್ಯದ್ ಸಾಧಿಕ್ ನದ್ದು ಎಂದು ತಿಳಿದುಬಂದಿದೆ. ಕತ್ತು ಹಾಗೂ ಮುಖದ ಮೇಲೆಲ್ಲ ಗಾಯದ ಗುರುತುಗಳು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಈತ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು, ಈ ಕುರಿತು ಗಲಾಟೆಯೂ ನಡೆದಿತ್ತು. ಇದರಿಂದ ಮನೆಯವರು ತಮ್ಮ ಮಗನನ್ನು ಯಾರೋ ಕೊಲೆಗೈದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎನ್ನಲಾಗಿದೆ.
ಶ್ರೀರಂಗಪಟ್ಟಣ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆಯ ಬಳಿಕವೇ ಸತ್ಯಾಂಶ ಹೊರಬೀಳಬೇಕಿದೆ.