ಮೈಸೂರು: ಇದೀಗ ಮತ್ತೆ ಸರಗಳ್ಳತನ ಜೀವ ಪಡೆದುಕೊಂಡಿದ್ದು, ಬೆಳಿಗ್ಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೋರ್ವರ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.
ಮೈಸೂರಿನ ತಿಲಕ್ ನಗರದ 2ನೇ ಮುಖ್ಯರಸ್ತೆಯಲ್ಲಿನ 2ನೇ ಕ್ರಾಸ್ ನಿವಾಸಿ ಉಷಾ (58) ಎಂಬಾಕೆಯೇ ಸರ ಕಳೆದುಕೊಂಡಿರುವ ಮಹಿಳೆ. ಭಾನುವಾರ ಬೆಳಿಗ್ಗೆ ಅವರು ತಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದಾಗ ಹೀರೋ ಹೊಂಡಾ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಜೆ.ಎಸ್.ಎಸ್ ಕಾಲೇಜು ಎಲ್ಲಿದೆ ಎಂದು ಉಷಾ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಉಷಾ ಜೆಎಸ್ಎಸ್ ಕಾಲೇಜು ಬಗ್ಗೆ ನನಗೇನು ತಿಳಿದಿಲ್ಲ ಎಂದು ಹೇಳುವಷ್ಟರಲ್ಲಿ ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಮತ್ತೋರ್ವ ವ್ಯಕ್ತಿ ಉಷಾ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾದರು ಎನ್ನಲಾಗಿದೆ.
ಕಳೆದ ಮೂರು ತಿಂಗಳಿನಿಂದ ಸರಗಳ್ಳತನ ನಿಯಂತ್ರಣದಲ್ಲಿತ್ತು. ಭಾನುವಾರ ಬೆಳಿಗ್ಗೆ ಮತ್ತೆ ಪುನರಾವರ್ತನೆಯಾಗಿರುವುದು ಪೊಲೀಸರಿಗೆ ತಲೆ ನೋವಾಗಿದೆ. ಪ್ರಕರಣ ಮಂಡಿಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.